

ಬೇಲೂರು: ಪಟ್ಟಣದ ನಗರದ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಶ್ರೀರುಕ್ಮಿಣಿ- ಪಾಂಡುರಂಗಸ್ವಾಮಿ ದೇಗುಲದಲ್ಲಿ 37ನೇ ವರ್ಷದ ದಿಂಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ದಿಂಡಿ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀರುಕ್ಮಿಣಿ ಪಾಂಡುರಂಗಸ್ವಾಮಿ ದೇವರಿಗೆ ವಿವಿಧ ಪುಷ್ಪಗಳಿಂದ ಶೃಂಗರಿಸಿ ಪೂಜೆ ಸಲ್ಲಿಸಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದವರು ಶ್ರೀಪಾಂಡುರಂಗ ಮತ್ತು ರುಕ್ಮಿಣಿ ದೇವರ ಉತ್ಸವಮೂರ್ತಿಯನ್ನು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರೊಂದಿಗೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಶ್ರೀ ಪಾಂಡುರಂಗನ ಭಜನೆ ಹಾಡುತ್ತ ಸಂಭ್ರಮಿಸಿದರು.
ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಬಿ.ಬಾಬುರಾವ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ 37ನೇ ವರ್ಷದ ದಿಂಡಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಿಂಡಿ ಮಹೋತ್ಸವದ ಅಂಗವಾಗಿ ಬುಧವಾರ ಪೂಜಾ ವಿಧಿ ವಿಧಾನಗಳು ನೆರವೇರಿಸಿದ್ದು. ಗುರುವಾರದಂದು ಪಟ್ಟಣದ ರಾಜ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಟಿ.ಆರ್.ಬಸಪ್ಪ ಮಾಸ್ಟರ್ ಮತ್ತು ಮಹೇಂದ್ರನಾಥ ಸಾಗರ ಅವರ ಕೀರ್ತನೆ, ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಪಾಂಡುರಂಗಸ್ವಾಮಿಗೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಜಯಣ್ಣ, ಖಜಾಂಚಿ ಚಂದ್ರಕಿರಣ್, ಕಾರ್ಯದರ್ಶಿ ಗೋಪಿ, ಅರುಣ್‌ಕುಮಾರ್, ದರ್ಶನ್, ರಾಮು, ಚರಣ, ಕಾರ್ತಿಕ್ ರಾವ್, ಶ್ರೀನಿವಾಸ್, ದೀಪಕ್, ರಾಘವೇಂದ್ರ, ಕೌಶಿಕ್, ಗಣೇಶ್ ಮತ್ತಿತರರಿದ್ದರು.