

ಬೇಲೂರು: ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪಿಸಿ, ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡು ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಶ್ರೀವೀರಾಂಜನೇಯಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನಿಂದ ಪುರಸಭೆ ಮುಂಭಾಗ ಬುಧವಾರ ಅಧ್ಯಕ್ಷ ಎ.ಆರ್.ಅಶೋಕ್ ಸಮ್ಮುಖದಲ್ಲಿ ಸಿಹಿ ಹಂಚಲಾಯಿತು.
ಶ್ರೀವೀರಾಂಜನೇಯಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಮೋಹನ್ ಮಾತನಾಡಿ, ಹಿಂದುಗಳ ಆರಾಧ್ಯ ದೈವ, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನಸ್ಥಳವಾದ ಆಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ಲೋಕಾರ್ಪಣೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಜತೆಗೆ ಅಯೋಧ್ಯೆಯಲ್ಲಿನ ರಾಮ ಮಂದಿರವು ಹಿಂದು ಧರ್ಮೀಯರ ಜೀವಾಳವಾಗಿದೆ. ಆದ್ದರಿಂದ ನಮ್ಮ ದೇವಾಲಯ ಸದಸ್ಯರೆಲ್ಲ ಸೇರಿ ಟ್ರಸ್ಟ್‌ನಿಂದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸುತಿದ್ದೇವೆ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ ಶುಭ ಹಾರೈಸಿದರು. ಶ್ರೀವೀರಾಂಜನೇಯಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಖಜಾಂಚಿ ಅನಂತರಾಜೇ ಅರಸ್, ಗೌರವಾಧ್ಯಕ್ಷ ನಿರ್ವಾಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಂಜೇಗೌಡ, ಪ್ರಧಾನ ಸಂಚಾಲಕ ಸಂತೋಷ್, ಉಪಾಧ್ಯಕ್ಷ ಶೇಖರ್, ನಿರ್ದೇಶಕರಾದ ಮಂಜುನಾಥ್, ನಕುಲ್, ವಿಜಯಕುಮಾರ್, ಚೇತು, ಗಿರಿ ಮತ್ತಿತರರಿದ್ದರು.