

ಕೊಳ್ಳೇಗಾಲ: ಪಟ್ಟಣದ ಹೊರ ವಲಯದಲ್ಲಿರುವ ಶ್ರೀರಾಕಾಸಮ್ಮ ಹಾಗೂ ಶ್ರೀಶಿವರಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ತಂಪು ಸೇವೆ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯಲ್ಲಿರುವ ಶ್ರೀಶಿವರಾವಳೇಶ್ವರಸ್ವಾಮಿ, ರಾಕಾಸಮ್ಮ, ಪಾರ್ವತಿ, ಗಣಪತಿ ದೇವರುಗಳಿಗೆ ತೋಮಾಲೆ (ಹೂವಿನ ಅಲಂಕಾರ) ಸೇವೆ ಮಾಡುವ ವಿಶೇಷ ಪೂಜೆ ಸಲ್ಲಿಸಲಾಯಿತು. ಅಭಿಷೇಕ, ಮಹಾ ಮಂಗಳಾರತಿಯನ್ನು ಭಕ್ತರು ಕಣ್ತುಂಬಿಕೊಂಡರು.
ಇದಕ್ಕೂ ಮೊದಲು ರಾಕಾಸಮ್ಮ ದೇವರ ಒಕ್ಕಲಿಗೆ ಸೇರಿದ ಹೆಣ್ಣು ಮಕ್ಕಳು ವಾದ್ಯ ಹಿಮ್ಮೇಳದಲ್ಲಿ ತಂಬಿಟ್ಟು ತರುವ ಮೂಲಕ ದೇವಸ್ಥಾನ ಪ್ರದಕ್ಷಿಣೆ ಮಾಡಿ ತಂಪು ಸೇವೆ ಸಲ್ಲಿಸಿದರು.
ಬಳಿಕ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇಂದಿನ ಎಲ್ಲ ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಜಗದೀಶ್ ಶಾಸ್ತ್ರಿ ನಡೆಸಿಕೊಟ್ಟರು.
ದೇವಸ್ಥಾನದಲ್ಲಿ ರಾಕಾಸಮ್ಮ ತಾಯಿ ಒಕ್ಕಲಿನ ಬೆಂಗಳೂರು, ಮೈಸೂರು, ಹನೂರು, ಶಂಕನಪುರ, ಅಜ್ಜೀಪುರ, ಮುಳ್ಳೂರು, ಬಣವೆ, ಗೊಬ್ಬಳಿಪುರ, ಪಟ್ಟಣದ ಭೀಮನಗರ ಸೇರಿದಂತೆ ಹಲವು ಗ್ರಾಮದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಭೀಮನಗರ 4ನೇ ವಾರ್ಡ್‌ನ ನಗರಸಭೆ ಸದಸ್ಯ ಮಂಜುನಾಥ್, ಭೀಮನಗರದ ಯಜಮಾನ ಚಿಕ್ಕಮಾಳಿಗೆ, ರಾಜಶೇಖರ ಮೂರ್ತಿ, ಶಿವಪ್ಪ, ಸನತ್ ಕುಮಾರ್, ಸಿದ್ದಾರ್ಥ, ಮುಖಂಡರಾದ ಶಿವರಾಜು, ಸುರೇಶ್, ಮಹದೇವಸ್ವಾಮಿ, ಲಿಂಗರಾಜು, ಪ್ರಭು ಮತ್ತಿತರಿದ್ದರು.