

ಹನೂರು: ಕನ್ನಡ ಸಾಹಿತ್ಯದಲ್ಲಿ ಶ್ರೀ ಮಲೆ ಮಹದೇಶ್ವರರು ಹಾಗೂ ಸಿದ್ದಪ್ಪಾಜಿ ಅವರ ಜನಪದ ಸಾಹಿತ್ಯ ವಿಶ್ವದಲ್ಲಿಯೇ ಶ್ರೇಷ್ಠ ಪರಂಪರೆಯನ್ನು ಹೊಂದಿದೆ ಎಂದು ಸುತ್ತೂರು ವೀರ ಸಿಂಹಾಸನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಗಡಿ ದಂಟಳ್ಳಿ ಗ್ರಾಮದಲ್ಲಿ ಭಾನುವಾರ ಸಾಹುಕಾರ್ ಪುಟ್ಟಪ್ಪ ಅವರ ಕುಟುಂಬ ವರ್ಗದ ಶೇಖರ್ ಎಂಬುವರಿಂದ ನಿರ್ಮಿಸುತ್ತಿರುವ ಶ್ರೀಮಹದೇಶ್ವರ, ಶ್ರೀ ಸಿದ್ದಪ್ಪಾಜಿ ಹಾಗೂ ಇತರ ಶಕ್ತಿ ದೇವತೆಗಳ ದೇಗುಲಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪವಾಡ ಪುರುಷ ಮಾದಪ್ಪನ ಸನ್ನಿಧಿಗೆ ಬಿಸಿಲು, ಮಳೆ ಹಾಗೂ ಚಳಿ ಎನ್ನದೇ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ತೆರಳುತ್ತಾರೆ. ಕಾಡು ಮೇಡುಗಳಿಂದ ಆವೃತ್ತವಾಗಿರುವ ಹಾಗೂ ಸಮೀಪದಲ್ಲಿಯೇ ಕಾವೇರಿ ನದಿಯನ್ನು ಹೊಂದಿರುವ ಈ ಮಾರ್ಗದ ದಂಟಳ್ಳಿಯಲ್ಲಿ ಶೇಖರ್ ಎಂಬುವರು ದೇಗುಲಗಳನ್ನು ನಿರ್ಮಿಸುತ್ತಿರುವುದು ಧಾರ್ಮಿಕತೆಯ ಪ್ರತೀಕ. ಈ ಸ್ಥಳ ನಿಜಕ್ಕೂ ಪುಣ್ಯಭೂಮಿ. ಇದರಿಂದ ನಡೆದು ಸಾಗುವ ಭಕ್ತರಿಗೆ ಅನುಕೂಲವಾಗಲಿದೆ. ಮಾದಪ್ಪನನ್ನು ನಂಬಿರುವ ಮನೆಗಳಲ್ಲಿ ನೆಮ್ಮದಿ ಸಿಗಲಿದೆ. ಈ ಭಾಗದಲ್ಲಿನ ಜನರು ಜ್ಞಾನದ ಬೆಳಕನ್ನು ನೀಡಿದ ಮಾದಪ್ಪ ಹಾಗೂ ಸಿದ್ದಪ್ಪಾಜಿ ಅವರನ್ನು ಆರಾಧ್ಯ ದೈವ ಎಂದು ಪೂಜಿಸುತ್ತಿದ್ದು, ಶಿಕ್ಷಣವನ್ನು ಪಡೆಯದೇ ಜನರು ಜನಪದ ಸಾಹಿತ್ಯವನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ದಿಸೆಯಲ್ಲಿ ಇಲ್ಲಿ ದೇಗುಲಗಳನ್ನು ನಿರ್ಮಿಸುತ್ತಿರುವುದು ಅರ್ಥಪೂರ್ಣವಾಗಿದೆ. ಭಕ್ತರಿಗೆ ದೇವರ ದರ್ಶನದ ಭಾಗ್ಯವನ್ನು ಕಲ್ಪಿಸಿಕೊಡುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸ ಎಂದರು.
ಮೂಲ ಸೌಕರ್ಯ ಒದಗಿಸಬೇಕು: ಮಾದಪ್ಪನ ಈ ಪುಣ್ಯ ಕ್ಷೇತ್ರದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಅರಣ್ಯ ಪ್ರದೇಶದೊಳಗೆ ವಾಸಿಸುತ್ತಿದ್ದಾರೆ. ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕೆಲವರಿಗೆ ಅರಣ್ಯ ಇಲಾಖೆ ವತಿಯಿಂದ ಭೂಮಿ ನೀಡಿದ್ದು, ಸಾಗುವಳಿ ಚೀಟಿಯನ್ನೂ ನೀಡಿದೆ. ಆದರೆ ಹಕ್ಕುಪತ್ರ ನೀಡದಿರುವ ಕಾರಣ ರೈತರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದರು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಈ ಭಾಗದ ಆರಾಧ್ಯ ದೈವ ಶ್ರೀಮಹದೇಶ್ವರರು ಉತ್ತರದಿಂದ ಕತ್ತಲೆ ರಾಜ್ಯಕ್ಕೆ ಆಗಮಿಸಿ ಜನರಲ್ಲಿದ್ದ ಅಜ್ಞಾನವನ್ನು ಹೊಗಲಾಡಿಸಿ ಬೆಳೆಕನ್ನು ನೀಡಿದ ಪವಾಡ ಪುರುಷ. ಹಾಗಾಗಿ ದಂಟಳ್ಳಿಯಲ್ಲಿ ಶ್ರೀಹರಗುರು ಚರಮೂರ್ತಿಗಳ ದಿವ್ಯ ಸಾನ್ನಿಧ್ಯದಲ್ಲಿ ದೇಗುಲಗಳನ್ನು ನಿರ್ಮಿಸುತ್ತಿರುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಈ ಸುದಿನ ಇತಿಹಾಸದ ಪುಟ್ಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ದೇಶದ ಸಂಸ್ಕೃತಿಯನ್ನು ಅವಲೋಕಿಸಿದಾಗ ದೇಗುಲಗಳು ಮಹತ್ವದ ಪಾತ್ರವನ್ನು ವಹಿಸಿದ್ದು, ಜನರಲ್ಲಿ ಶ್ರದ್ಧೆ ಹಾಗೂ ಭಕ್ತಿಯನ್ನು ಹೆಚ್ಚಿಸಿವೆ. ಮನಸ್ಸಿಗೆ ನೆಮ್ಮದಿಯನ್ನು ನೀಡುವ ಶಕ್ತಿ ಕೇಂದ್ರಗಳಾಗಿವೆ. ಇದಕ್ಕೆ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ನೆರೆದಿದ್ದ ಭಕ್ತರೇ ಸಾಕ್ಷಿ ಎಂದರು.
ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಕನಕಪುರದ ದೇಗುಲ ಮಠಕ್ಕೂ ದಂಟಳ್ಳಿ ಗ್ರಾಮಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದ್ದು, ಇಲ್ಲಿನ ಜನರು ಶ್ರೀಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಇಲ್ಲಿ ಇದೀಗ ಶೇಖರ್ ಅವರು ದೇಗುಲಗಳನ್ನು ನಿರ್ಮಿಸುತ್ತಿರುವುದು ಧಾರ್ಮಿಕತೆಯ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವವರ ಸಂಖ್ಯೆ ಕಡಿಮೆ. ಆದರೆ ಶೇಖರ್ ಅವರು ದೇಗುಲಗಳನ್ನು ನಿರ್ಮಿಸುತ್ತಿರುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
ದೇವರನ್ನು ಧ್ಯಾನಿಸಿ: ತುಮಕೂರು ಸಿದ್ಧಗಂಗಾ ಮಠದ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇವರು ನಿರ್ಗುಣ, ನಿರಾಕಾರ ಹಾಗೂ ನಿರೂಪ. ಹಾಗಾಗಿ ದೇವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ದೇಗುಲವನ್ನು ನಿರ್ಮಿಸಿ ನಿಜ ಭಕ್ತಿಯಿಂದ ದೇವರನ್ನು ಧ್ಯಾನಿಸುವುದು ಭಗವಂತನನ್ನು ನೆನೆಯುವ ಪ್ರಥಮ ಹಂತ. ಹಾಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಮನಃಶಾಂತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಸಹಕಾರ ನೀಡಬೇಕು: ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಜೀವನದಲ್ಲಿ ಕಷ್ಟ ಎದುರಾದಾಗ ಪ್ರತಿಯೊಬ್ಬರೂ ಒಳಿತಿಗಾಗಿ ದೇವರನ್ನು ಪೂಜಿಸುತ್ತೇವೆಯೇ ಹೊರತು ದೇಗುಲಗಳ ನಿರ್ಮಾಣಕ್ಕೆ ಮುಂದಾಗುವುದಿಲ್ಲ. ಆದರೆ ಇಡೀ ಗ್ರಾಮಕ್ಕೆ ಒಳಿತಾಗಲಿ ಎನ್ನುವ ಉದ್ಧೇಶದಿಂದ ಶೇಖರ್ ಅವರು ದೇಗುಲಗಳನ್ನು ನಿರ್ಮಿಸುತ್ತಿರುವುದು ಪುಣ್ಯದ ಕೆಲಸ. ಈ ಕೆಲಸಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡಬೇಕು ಎಂದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ದೇಗುಲಗಳ ನಿರ್ಮಾತೃ ಶೇಖರ್ ಮತ್ತಿತರರು ಹಾಜರಿದ್ದರು.