

ಸುಂಟಿಕೊಪ್ಪ: ಕೊಡಗರಹಳ್ಳಿಯ ಶ್ರೀಬೈತೂರಪ್ಪ ಶ್ರೀಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ಶ್ರೀಸುಬ್ರಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸುಬ್ರಮಣ್ಯ ಷಷ್ಠಿ ಅಂಗವಾಗಿ ದೇವಾಲಯವನ್ನು ತಳಿರು, ತೋರಣ ಸೇರಿದಂತೆ ವಿವಿಧ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಳಗ್ಗಿನಿಂದ ಶ್ರೀಸುಬ್ರಮಣ್ಯ ನಾಗದೇವತಾ ಗುಡಿಯಲ್ಲಿ ಶ್ರೀ ನಾಗದೇವರಿಗೆ ತನುತಂಬಿಲ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಹರಿದ್ರಾರ್ಣವ ಅಭಿಷೇಕ, ಕ್ಷೀರಾಭಿಷೇಕ ಸೇವೆಗಳೊಂದಿಗೆ ವಿಶೇಷ ಕೈಂಕರ್ಯ ನೆರವೇರಿಸಲಾಯಿತು.
ಪ್ರಧಾನ ಆರ್ಚಕ ರಾಘವೇಂದ್ರಭಟ್ ಮತ್ತು ನರಸಿಂಹ ಭಟ್ ಅವರು ದಿನದ ವಿಶೇಷ ಪೂಜಾ ಕೈಂಕರ್ಯ ಮಹಾಮಂಗಳಾರತಿ ನೆರವೇರಿಸಿದರು. ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು.
ದೇವಾಲಯದ ಟ್ರಸ್ಟಿ ಕಾರ್ಯದರ್ಶಿ ಬಿ.ಸಿ.ದಿನೇಶ್, ತಕ್ಕ ಜಗರಂಡ ಹ್ಯಾರಿ ಕಾರ್ಯಪ್ಪ, ಪ್ರಧಾನ ಟ್ರಸ್ಟಿಗಳಾದ ಕೆ.ಎಸ್.ಮಂಜುನಾಥ್, ದತ್ತ ಸೋಮಣ್ಣ, ಊರಿನ ಹಿರಿಯರು, ನೂರಾರು ಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.