ಶ್ರೀಪಟ್ಟದ ಮಹದೇವ ಸ್ವಾಮೀಜಿ 31ನೇ ಪುಣ್ಯ ಸಂಸ್ಮರಣೋತ್ಸವ ಇಂದು

Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಶ್ರೀಸಾಲೂರು ಬೃಹನ್ಮಠದಲ್ಲಿ ಜ.29 ರಂದು ಲಿಂಗೈಕ್ಯ ಶ್ರೀಪಟ್ಟದ ಮಹದೇವ ಸ್ವಾಮೀಜಿ ಅವರ 31ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ.

ದೇಶದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಮಠಗಳು ಪ್ರಾಚೀನ ಕಾಲದಿಂದಲೂ ತನ್ನದೇಯಾದ ವೈಶಿಷ್ಟೃತೆಯನ್ನು ಹೊಂದಿದೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಕಾಯಕ ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ವಲಿಸಲು ಆರಂಭಿಸಿದವು. 20ನೇ ಶತಮಾನದಲ್ಲಿ ಕಾಯಕದ ಜತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲು ಹಾಕಿದವು. ನಾಡಿನಲ್ಲಿ ಕಾಯಕ, ದಾಸೋಹ ಹಾಗೂ ಶೈಕ್ಷಣಿಕ ಪರಂಪರೆಯಲ್ಲಿ ಶ್ರೀಸಾಲೂರು ಬೃಹನ್ಮಠವು ಒಂದು. ಇಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾಯಕದ ಜತೆಗೆ ಅಭಿವೃದ್ಧಿಗೆ ಶ್ರಮಿಸಿದ ಶ್ರೀಪಟ್ಟದ ಮಹದೇವಸ್ವಾಮೀಜಿ ಅವರ ಸೇವೆ ಅನನ್ಯ. ಅವರು ಬಾಲ್ಯದಲ್ಲಿಯೇ ಶ್ರೀಮಹದೇಶ್ವರರ ಪ್ರಭಾವಕ್ಕೆ ಒಳಗಾಗಿದ್ದರು. ಕನಕಪುರ ದೇಗುಲ ಮಠದಲ್ಲಿ ಶಿಕ್ಷಣ ಪಡೆದರು. ಆದರೆ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ.

ಬಳಿಕ ಗುರು ಶ್ರೀಮುದ್ದುವೀರ ಸ್ವಾಮೀಜಿ ಅವರ ಅಪ್ಪಣೆಯಂತೆ ಮ.ಬೆಟ್ಟಕ್ಕೆ ಬಂದು ನೆಲೆಸಿ ಸ್ವಾಮಿಯ ಪೂಜಾ ಕಾರ್ಯದ ಜತೆಗೆ ಮಠದ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗೆಯೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮ.ಬೆಟ್ಟದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಂಸ್ಕೃತ ಶಾಲೆ, ವೇದಾಗಮ ಪಾಠಶಾಲೆ ಸ್ಥಾಪಿಸಿದರು. ಗಿರಿಜನರು, ದೀನ ದಲಿತರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದರಲ್ಲದೆ, ನಿರ್ಗತಿಕ ಮಕ್ಕಳಿಗೆ ವಸತಿ ಸೌಕರ್ಯವನ್ನು ಕಲ್ಪಿಸಿದ್ದರು. ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಹಳ್ಳಿಗಳಿಗೆ ತೆರಳಿ ಕೋರಣ್ಯವನ್ನು ಸಂಗ್ರಹಿಸುವುದರ ಮೂಲಕ ದಾಸೋಹ ಹಾಗೂ ಜ್ಞಾನಾರ್ಜನೆಯನ್ನು ಅಭಿವೃದ್ಧಿಪಡಿಸುತ್ತಾ ಸಾಲೂರು ಮಠದ ಕಟ್ಟಡ ನಿರ್ಮಾಣ ಕಾರ್ಯವನ್ನು ನೆರವೇರಿಸಿದರು. ಹಾಗಾಗಿ ಶ್ರೀಗಳ ಸೇವೆ ಅಪಾರ. ಪ್ರತಿ ವರ್ಷ ಇವರ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದೀಗ 31ನೇ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.

ಸಂಸ್ಮರಣೋತ್ಸವ: ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಹಾಗೂ ಕನಕಪುರ ದೇಗುಲ ಮಠದಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಲಿದ್ದಾರೆ. ಸಾಲೂರು ಬೃಹನ್ಮಠದ ಹಿರಿಯ ಶ್ರೀಪಟ್ಟದ ಗುರುಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ದೇಗುಲ ಮಠದ ಕಿರಿಯ ಶ್ರೀಚನ್ನಬಸವ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಲಿದೆ.

ಪ್ರಾತಃಕಾಲ 4.30ಕ್ಕೆ ಲಿಂಗೈಕ್ಯ ಪಟ್ಟದ ಮಹದೇವಸ್ವಾಮೀಜಿ ಅವರ ಗದ್ದುಗೆಗೆ ಏಕವಾರು ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆಯೊಂದಿಗೆ ಮಹಾ ಮಂಗಳಾರತಿ ಹಾಗೂ ಪೂಜಾ ಕೈಂಕರ್ಯ ನಡೆಯಲಿದೆ. 8.30ಕ್ಕೆ ಶ್ರೀಮಠದಿಂದ ಭಕ್ತರ ಸಮ್ಮುಖದಲ್ಲಿ ದೇಗುಲಕ್ಕೆ ಹೊರಟು ಅಂತರಗಂಗೆ, ತಂಬಡಿಗೇರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಕಣ್ಣಿನ ಬೃಹತ್ ಉಚಿತ ತಪಾಸಣಾ ಶಿಬಿರ: ಶ್ರೀಗಳ ಸಂಸ್ಮರಣೋತ್ಸವ ಅಂಗವಾಗಿ ಸಾಲೂರು ಬೃಹನ್ಮಠದಲ್ಲಿ ಚಾ.ನಗರ ರೆಡ್‌ಕ್ರಾಸ್ ಸಂಸ್ಥೆ, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ಮರಿಯಾಲ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ವತಿಯಿಂದ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net