ಶ್ರೀದೊಡ್ಡ ಸಂಪಿಗೇಶ್ವರಸ್ವಾಮಿ ದೇಗುಲದಲ್ಲಿ ಅಗ್ನಿಕುಂಡ ದರ್ಶನ

27 HANUR 2 A
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿಯ ಶ್ರೀದೊಡ್ಡ ಸಂಪಿಗೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಗುರುವಾರ ಅಗ್ನಿಕುಂಡ ದರ್ಶನವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಅಗ್ನಿಕುಂಡ ದರ್ಶನ ಹಿನ್ನೆಲೆಯಲ್ಲಿ ಬೆಳಗ್ಗೆ ದೇಗುಲದಲ್ಲಿ ದೇವರಿಗೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರ ಜತೆಗೆ ರಾತ್ರಿ ಜಾಗರಣೆ ಪಾಲ್ಗೊಂಡಿದ್ದ ಸಾವಿರಾರು ದೇಗುಲದ ಆವರಣದಲ್ಲಿ ನೆರೆದಿದ್ದರು. ಬೆಳಗ್ಗೆ 6ರಲ್ಲಿ ದೇಗುಲದ ಮುಂಭಾಗದಲ್ಲಿ ಮೂರು ಕವಡಿನ ಕಂಬದಲ್ಲಿ ಹಾಕಲಾಗಿದ್ದ ಅಗ್ನಿಕುಂಡಕ್ಕೆ ಅರ್ಚಕರು ದೀಪ, ಧೂಪದಾರತಿ ಸೇವೆಯನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.

6 ವರ್ಷದ ಮಗುವಿನಿಂದ ಅಗ್ನಿಕುಂಡವನ್ನು ಸ್ಪರ್ಶಿಸಿದ ಬಳಿಕ ಅರ್ಚಕರು ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ ಎತ್ತಿ ಪ್ರದರ್ಶಿಸಿದರು. ಈ ವೇಳೆ ಭಕ್ತರು ಜಯಘೋಷವನ್ನು ಮೊಳಗಿಸಿದರು. ಬಳಿಕ ಮಳೆ, ಬೆಳೆಯ ಮಾಹಿತಿಯನ್ನು ತಿಳಿಸಲಾಯಿತು.

ಹನೂರು, ಉದ್ದನೂರು, ಬೆಳತ್ತೂರು, ಸಿರಗೋಡು, ಕಂಡಯ್ಯನಪಾಳ್ಯ, ಮಾಲಾಪುರ, ಬೂದಿಪಡಗ, ಪಿ.ಜಿ.ಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.

ಅಗ್ನಿಕುಂಡ ದರ್ಶನದ ಬಳಿಕ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ಹನೂರು ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net