ಶ್ರೀಚಾಮುಂಡೇಶ್ವರಿ ಅಮ್ಮನ ದೇವಾಲಯ ಸಂಪ್ರೋಕ್ಷಣೆ

25M.D.R.5
Published on

ಮದ್ದೂರು: ತಾಲೂಕಿನ ರಾಂಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಸಂಪ್ರೋಕ್ಷಣೆ ನೂತನ ವಿಗ್ರಹ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ, ಪೂಜಾ ಮಹೋತ್ಸವದ ಗುರುವಾರ ಹಾಗೂ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮಿಜಿ ಮಾತನಾಡಿ, ದೇಗುಲಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ದೇವರನ್ನು ನಂಬಿ ಪೂಜಿಸಿದರೆ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಎಂದರು.

ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ರಾಂಪುರ ಗ್ರಾಮದ ಶ್ರೀರಾಮಲಿಂಗೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಚೌಡಯ್ಯ ದೀಕ್ಷಿತ್ ವಹಿಸಿದ್ದರು. ಶಿವಾರದ ಪ್ರದೀಪ್ ಮತ್ತು ತಂಡದವರಿಂದ ನಡೆಸಿಕೊಟ್ಟ ಗೀತಾ ಗಾಯನ ಕಾರ್ಯಕ್ರಮ ಕೇಳುಗರ ಗಮನ ಸೆಳೆಯಿತು.

ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ಮಧುಜಿ.ಮಾದೇಗೌಡ, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೆಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಶ್ರೀಚಾಮುಂಡೇಶ್ವರಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಜಿ.ಮನು, ಕಾರ್ಯದರ್ಶಿ ಮನು, ಟ್ರಸ್ಟಿಗಳಾದ ಗೋವಿಂದರಾಜು, ಪುಟ್ಟಸ್ವಾಮಿ, ಕಾಳಪ್ಪ, ವಿನಯ್, ನಂದೀಶ್ ಸೇರಿದಂತೆ ಇತರರಿದ್ದರು.

ಕಾರ್ಯಕ್ರಮಗಳ ವಿವರ: ಗುರುವಾರ ಗಣಪತಿ ಪೂಜೆ, ಪುಣ್ಯಾಹ, ದೇವಾಲಯ ಸಂಪ್ರೋಕ್ಷಣೆ, ಗಣಪತಿ ವಾಸ್ತು ಹೋಮ, ಪಂಚಗವ್ಯ, ಕಳಸ ಸ್ಥಾಪನೆ. ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನ 4 ಗಂಟೆಗೆ ಚಾಮುಂಡೇಶ್ವರಿ ಅಮ್ಮನವರ ನೂತನ ಗುಡ್ಡಪ್ಪನ್ನು ಗೋತ್ತು ಮಾಡಲಾಯಿತು. ಶುಕ್ರವಾರ ಬೆಳಗ್ಗೆ ಸುಪ್ರಭಾತ ಸೇವೆ, ಗಣಪತಿ ಪೂಜೆ, ಪುಣ್ಯಾಹ, ದೇವಿಯವರ ಧ್ಯಾನ, ಅಹದಾನದಿ ಪೂಜಾದಿಗಳು, ಗಣಪತಿ ಹೋಮ, ನವಗ್ರಹ ಹೋಮ, ದುರ್ಗಹೋಮ, ಅಷ್ಟಮಹಾಲಕ್ಷ್ಮೀ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನ 1 ಗಂಟೆಗೆ ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net