

ಬಾಗಲಕೋಟೆ: ಜಗತ್ತಿನಲ್ಲಿ ಪಾಪ ಕಾರ್ಯಗಳು ಹೆಚ್ಚಾದಾಗ, ಸಾದು ಸಂತರ ರಕ್ಷಣೆಗಾಗಿ ಅವತರಿಸುತ್ತೆನೆಂದ ಶ್ರೀಕೃಷ್ಣ ಅವತಾರಿ ಪುರುಷನಾಗಿದ್ದಾನೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಗವಾನ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕುಲಕ್ಕೆ ಶ್ರೀಕೃಷ್ಣನು ಅರ್ಜುನನ್ನು ನಿಮಿತ್ತ ಮಾಡಿಕೊಂಡು ಭಗವದ್ಗೀತೆಯನ್ನು ಬೋಧನೆ ಮಾಡಿದ್ದಾನೆ. ಈ ಧರ್ಮ ಗ್ರಂಥದಲ್ಲಿ ಪ್ರತಿಯೊಬ್ಬರು ಜಾತಿ ಬೇಧ ಕಲಹಗಳಿಲ್ಲದ ನಿಜ ಜೀವನ ಶೈಲಿಯ ಪರಿಯನ್ನು ವಿವರಿಸಿದ್ದಾನೆ ಎಂದರು.
ಇಂತಹ ಮಹಾ ಪುರುಷರು ಜನ ಕಲ್ಯಾಣ ಬಯಸಿದವರು. ಇವರು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಲ್ಲ. ವಿಶ್ವ ಮಾನವೀಯತೆಯನ್ನು ತಿಳಿಸಿಕೊಟ್ಟವರಾಗಿದ್ದಾರೆ. ಭರತ ಭೂಮಿಯಲ್ಲಿ ರಾಮಾಯಣ ಮಹಾಭಾರತಗಳೆಂಬ ಗ್ರಂಥಗಳಲ್ಲಿ ರಾಮಾಯಣದಲ್ಲಿ ರಾಮ ಸೌಮ್ಯ ಸತ್ಯ ನಿಷ್ಠೆಯುಳ್ಳವನಾಗಿದ್ದಾನೆ. ಶ್ರೀಕೃಷ್ಣನು ಧರ್ಮ ರಕ್ಷಣೆಗಾಗಿ ಕೆಲವು ಕಪಟ ನಾಟಕವಾಡಿ ಧರ್ಮ ಸಂಸ್ಥಾಪನೆ ಮಾಡಿದ ಮಹಾ ಪುರುಷ ಎಂದು ತಿಳಿಸಿದರು.
ಅನ್ಯಾಯವಾಗುತ್ತಿರುವ ಸಮಯದಲ್ಲಿ ಸುಳ್ಳು ಕಪಟಗಳು ಕೂಡಾ ಧರ್ಮ ರಕ್ಷಿಸುತ್ತದೆ ಎಂಬುಂದಕ್ಕೆ ಕೃಷ್ಣನೇ ಸಾಕ್ಷಿ. ಜಯಂತಿಗಳನ್ನು ಆಚರಿಸಿದರೇ ಸಾಲದು ಅವರು ಹಾಕಿದ ಮಾರ್ಗದಲ್ಲಿ ಸ್ವಲ್ಪವಾದರೂ ನಡೆದುಕೊಂಡರೆ ಸಾರ್ಥಕವಾಗುತ್ತದೆ ಎಂದರು.
ಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಮಲ್ಲಪ್ಪ ಹೊಸೂರ ಉಪನ್ಯಾಸ ನೀಡಿ, ಶ್ರೀಕೃಷ್ಣ ಗೊಲ್ಲನಾಗಿ ಜನಿಸಿದ್ದರು ಬೌದ್ಧರಿಗೂ, ಜೈನರಿಗೂ, ಮುಸ್ಲಿಂರಿಗೂ ಮಾದರಿಯಾಗಿದ್ದಾನೆ. ಜನರ ಜನಾರ್ದನ ಅಂತ ಆರಾಧಿಸುತ್ತಾರೆ. ಪ್ರತಿಯೊಬ್ಬರು ಸುಶಿಕ್ಷಿತರಾಗಿ ಮಹಾಪುರುಷನ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಯಾದವ (ಗೊಲ್ಲ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಜಿಲ್ಲಾಡಳಿತದಿಂದ ಅಂಬೇಡ್ಕರ ಭವನದ ವರೆಗೆ ಭಾವ ಚಿತ್ರದ ಮೆರವಣಿಗೆ ನಡೆಯಿತು. ಜಿಲ್ಲಾ ಪಂಚಾಯಿತಿಯ ಬಿ.ಡಿ. ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಯಾದವ ಸಮಾಜದ ಮುಖಂಡರು ಇದ್ದರು.