

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಶ್ರೀ ವಾರಾಹಿ ಮತ್ತು ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವ ಗಣಪತಿ ಹೋಮ, ವಿವಿಧ ಪೂಜಾ ವಿಧಾನಗಳೊಂದಿಗೆ ಸೋಮವಾರ ಆರಂಭಗೊಂಡಿತು.
ಜಾತ್ರೆ ಅಂಗವಾಗಿ ದೇವಸ್ಥಾನದ ಸುತ್ತಲೂ ವಿವಿಧ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಬಾಳೆಕಂದು, ಮಾವಿನ ತೋರಣ, ರಂಗೋಲಿ ಅಲಂಕಾರಗಳಿಂದ ದೇವಾಲಯ ಕಂಗೊಳಿಸುತ್ತಿತ್ತು. ಭಕ್ತರಿಗೆ ದೇವಸ್ಥಾನ ಆವರಣದಲ್ಲಿ ಪೂಜೆ ನೆರವೇರಿಸಲು ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಜಾತ್ರೆ ಈ ವರ್ಷ ನಡೆಯುತ್ತಿರುವುದು ಗ್ರಾಮದ ಜನರಲ್ಲಿ ಸಂತೋಷವನ್ನುಂಟು ಮಾಡಿದೆ.
ಮೊದಲ ದಿನವಾದ ಸೋಮವಾರ ಮೈಸೂರು ಅರಮನೆ ತಂಪು ಹೆಸರಿನಲ್ಲಿ ತಂಪು ಸೇವೆ ನೆರವೇರಿತು. ತಹಸೀಲ್ದಾರ್ ಅವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ತಂಪು ಪೂಜೆಯನ್ನು ಸಂಜೆ ನೆರವೇರಿಸಲಾಯಿತು ಎಂದು ಪಟೇಲ್ ನಾಗರಾಜು ತಿಳಿಸಿದರು. ಇಲ್ಲಿನ ಸಂಪ್ರದಾಯದಂತೆ ತಾರಕ ನದಿಯ ಬಳಿ ಮಾರಮ್ಮನವರ ಪತಿ ಎಂದು ಕರೆಯುವ ಫೋಟೋರಾಯ ಸ್ವಾಮಿಯನ್ನು ಪೂಜಿಸಿ ದೇವಸ್ಥಾನದ ಬಳಿಗೆ ತಂದು ಸ್ಥಾಪಿಸಲಾಯಿತು. ನಂತರ ಜಾತ್ರಾ ಮಹೋತ್ಸವ ತಯಾರಿ ಆರಂಭವಾಯಿತು.
ಜುಲೈ 2ರವರೆಗೆ ವಿವಿಧ ಪೂಜೆಗಳು ನಡೆಯಲಿವೆ. ಪಟ್ಟಣದ ಮನೆಗಳು, ದೇಗುಲಗಳು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿವೆ. ಕೊಂಡೋತ್ಸವಕ್ಕೆ ಕಗ್ಗಲಿ ಸೌದೆಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಮಂಗಳವಾರ ರಾತ್ರಿ 9 ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಜು.2ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ.
ಮುಖಂಡರಾದ ಶಾನುಭೋಗ ಫಣೀಶ್, ಎಂ.ಸಿ.ದೊಡ್ಡನಾಯಕ, ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಸೋಮು, ಶ್ರೀಕಾಂತ್, ಪ್ರಮೋದ್, ಪ್ರಕಾಶ್, ನಾಗರಾಜ್, ಚಂದ್ರಮೌಳಿ, ಶ್ರೀಕಂಠರಾಜ್, ಬಸವರಾಜ ಶೆಟ್ಟಿ, ಸುನೀಲ್ ಕುಮಾರ್, ಪ್ರಸಾದ್, ಸೋಮಸುಂದರ್ ಇದ್ದರು.