

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಏ.10ರಂದು (ಗುರುವಾರ) ಜರುಗಲಿದ್ದು ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ಜರುಗಲಿದೆ.
ಇದೇ ಪ್ರಥಮ ಬಾರಿಗೆ ಕಳೆದ ಒಂದು ವಾರದಿಂದ ಪಟ್ಟಣದ ಮುಖ್ಯರಸ್ತೆ, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೇಗುಲ ಆಡಳಿತದಿಂದ ವಿದ್ಯುತ್ ದೀಪಾಲಂಕಾರ ಮಾಡಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ರಥೋತ್ಸವದಂದು ದೇಗುಲಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ತೊಂದರೆ ಆಗಬಾರದೆಂದು ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲೂ ಪ್ರತಿ ಬಾರಿ ಹಾಕುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಉತ್ಸವ ಮೂರ್ತಿ ಸಾಗುವ ವೈಕುಂಠ ಬೀದಿಯ ನಂತರದಲ್ಲಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಾತ್ರೆಗೆ ಆಗಮಿಸಿ ಉಳಿದುಕೊಳ್ಳುವ ಭಕ್ತರ ಅನುಕೂಲಕ್ಕಾಗಿ ಪಟ್ಟಣದಾದ್ಯಂತ ಹಾಗೂ ಪಟ್ಟಣದ ಹೊರಭಾಗದಲ್ಲಿರುವ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳನ್ನು ಭಕ್ತರು ಬಳಸಿಕೊಳ್ಳುವುದಕ್ಕೆ ತಾಲೂಕು ಆಡಳಿತದಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದಾದ್ಯಂತ 28 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಾಹನಗಳ ಪಾಕಿರ್ಂಗ್‌ಗೆ ಪಟ್ಟಣದ ಹೊರ ಭಾಗದಲ್ಲಿ ಸ್ಥಳವಕಾಶ ಕಲ್ಪಿಸಲಾಗಿದೆ. ಪಟ್ಟಣದೊಳಕ್ಕೆ ಬರುವ ಭಕ್ತರಿಗಾಗಿ ದೇವಸ್ಥಾನದ ಹಿಂಭಾಗ, ಗೆಂಡೆಗಳ್ಳಿ ರಸ್ತೆ, ಬಿಕ್ಕೋಡು ರಸ್ತೆ, ಹಳೇಬೀಡು ರಸ್ತೆ, ಚಿಕ್ಕಮಗಲೂರು ರಸ್ತೆ, ಹಾಸನ ರಸ್ತೆ ಸೇರಿದಂತೆ ಇತರೆಡೆ ಪಾರ್ಕಿಂಗ್‌ಗೆ ಸ್ಥಳ ಗುರುತಿಸಿ ಪೊಲೀಸರನ್ನು ನೇಮಿಸಲಾಗಿದೆ. ದೇವಸ್ಥಾನಕ್ಕೆ ಬರುವ ಅತೀ ಗಣ್ಯರು, ಹಿರಿಯ ಅಧಿಕಾರಿಗಳು ಬಂದಂತಹ ಸಂದರ್ಭದಲ್ಲಿ ಮಾತ್ರ ಕೆಂಪೇಗೌಡ ವೃತ್ತದಲ್ಲಿರುವ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯಲ್ಲಿರುವ ಬ್ಯಾರಿಕೇಡ್ ಮೂಲಕ ಒಳ ಬರಲು ಅವಕಾಶ ಕಲ್ಪಿಸಲಾಗಿದೆ.
ಹರಕೆ ಮುಡಿಪುಗಳನ್ನು ಅರ್ಪಿಸಲು ಪಟ್ಟಣ ಸಮೀಪದ ವಿಷ್ಣು ಸಮುದ್ರ ಕಲ್ಯಾಣಿ ಸಮೀಪದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ನಾನಗೃಹ, ಶೌಚಗೃಹ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರನ್ನು ಸ್ವಾಗತಿಸಲು ಪಟ್ಟಣ ಪ್ರವೇಶಿಸುವ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸ್ವಾಗತ ಕಮಾನು ನಿರ್ಮಿಸಲಾಗಿದೆ. ವೈಕುಂಠ ಬೀದಿಯ ರಸ್ತೆ ಬದಿಯಿಂದ ಕೆಂಪೇಗೌಡ ವೃತ, ಬಸ್ ನಿಲ್ದಾಣದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳು, ದಿನನಿತ್ಯದ ವಸ್ತುಗಳ ಮಾರಾಟ ಮತ್ತು ಇತರೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದ.
ರಥದ ಸಿದ್ಧತೆಯಲ್ಲಿ ಕಾರ್ಮಿಕರು, ದೇಗುಲದ ಅಡ್ಡೆಗಾರರು ಮತ್ತು ಸಿಬ್ಬಂದಿತೊಡಗಿದ್ದರು. ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ದೇಗುಲದ ಆಡಳಿತಾಧಿಕಾರಿ ಮತ್ತು ದೇಗುಲದ ಅಧಿಕಾರಿ, ಸಿಬ್ಬಂದಿ, ಅಡ್ಡೆಗಾರರು, ಯದ್ನ ಮರಗಾರರು, ನಗಾರಿ ಬಾರಿಸುವವರು, ಕೈ ಮಣೆ ಹಾಕುವವರು, 16 ಗ್ರಾಮಗಳ ಎಂಟು ಮೂಲೆ ನಾಡಪಟೇಲರು ಸೇರಿದಂತೆ ದೇವರ ಒಕ್ಕಲುಗಳವರು, ವಿವಿಧ ಸಮಿತಿ ಸದಸ್ಯರು ಸಿದ್ಧತೆ ಕೈಗೊಂಡಿದ್ದು ಈ ಬಾರಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ.
-----------------
ಭಕ್ತರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಈ ಬಾರಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಕಳೆ ಬಂದಿದೆ. ಭಕ್ತರ ಅನುಕೂಲಕ್ಕಾಗಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರು ಮತ್ತು ಸಾರ್ವಜನಿಕರು ಸಹ ತಾಲೂಕು ಆಡಳಿತ ಮತ್ತು ದೇಗುಲ ಆಡಳಿತಕ್ಕೆ ಸಹಕಾರ ನೀಡುವ ಮೂಲಕ ಐತಿಹಾಸಿಕ ಕ್ಷಣದ ರಥೋತ್ಸವಕ್ಕೆ ಸಾಕ್ಷಿಕರಿಸಬೇಕು.
ಎಚ್.ಕೆ.ಸುರೇಶ್, ಶಾಸಕ
ಭಕ್ತರ ಅನುಕೂಲಕ್ಕಾಗಿ ಎಲ್ಲ ಸೌಲಭ್ಯಗಳನ್ನು ಶಾಸಕರ ನೇತೃತ್ವದಲ್ಲಿ ತಾಲೂಕು ಆಡಳಿತ ಮತ್ತು ದೇವಸ್ಥಾನದ ಆಡಳಿತದಿಂದ ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಸಂಜೆ ವಿವಿಧ ಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎಸ್.ಎಂ.ರಾಜು, ಅಧ್ಯಕ್ಷ, ಜಯ ಕರ್ನಾಟಕ ಸಂಘಟನೆ