

ಬೇಲೂರು: ಹಾಸನದ ನೂತನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಶನಿವಾರ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಸಂದರ್ಭ ಅವರನ್ನು ದೇಗುಲ ಆಡಳಿತದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ದೇವರ ದರ್ಶನ ಪಡೆದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ದೇಗುಲದ ಶಿಲ್ಪಕಲೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬೇಲೂರು-ಹಳೇಬೀಡಿನ ದೇಗುಲಗಳ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಶೀಘ್ರವೇ ಬೇಲೂರಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿ ಚರ್ಚಿಸಲಾಗುವುದು. ಬೇಲೂರು-ಹಳೇಬೀಡು ನನ್ನ ನೆಚ್ಚಿನ ತಾಣಗಳು, ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದಿದ್ದೆ. ಇಲ್ಲಿನ ಶಿಲ್ಪಕಲೆಗಳ ವೈಭವವನ್ನು ಮತ್ತೆ ಮತ್ತೆ ನೋಡುವ ಆಸೆ ನನಗಿತ್ತು. ಆದರೆ ಈಗ ನಾನು ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದು ಒಂದು ಸೌಭಾಗ್ಯವೇ ಸರಿ, ಬೇಲೂರು-ಹಳೇಬೀಡು ದೇಗುಲಗಳು ಈಗಾಗಲೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮೂಲಕ ಜಾಗತಿಕ ಮನ್ನಣೆ ಪಡೆದಿವೆ. ಇಂತಹ ಪ್ರವಾಸಿ ತಾಣಕ್ಕೆ ಮೂಲ ಸೌಲಭ್ಯ ಕಲ್ಪಿಸುವುದು ಜಿಲ್ಲಾಡಳಿದ ಕರ್ತವ್ಯವಾಗಿದೆ. ಅಲ್ಲದೆ ಇಲ್ಲಿನ ಪ್ರಮುಖ ಸಮಸ್ಯೆಗಳಾದ ಪಾರ್ಕಿಂಗ್, ಸುಗಮ ಸಂಚಾರ, ಶಿಥಿಲ ದೇಗುಲಗಳ ಅಭಿವೃದ್ಧಿ, ಹೈಟೆಕ್ ಶೌಚಗೃಹ, ಪ್ರವಾಸಿಗರಿಗೆ ವಿಶ್ರಾಂತಿ ಗೃಹಗಳು, ದೇಗುಲದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮನೆ-ವಾಣಿಜ್ಯ ಕಟ್ಟಡದ ನಿರ್ಮಾಣ ಸೇರಿದಂತೆ ಹತ್ತಾರು ವಿಚಾರಗಳ ಬಗ್ಗೆ ಸ್ಥಳೀಯವಾಗಿ ಅಭಿಪ್ರಾಯ ಪಡೆಯಲಾಗುವುದು.
ಧಾರ್ಮಿಕ ದತ್ತಿ, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಲು ಸಿದ್ಧತೆಗೆ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅವರಿಗೆ ಸೂಚಿಸಿದ ಅವರು ಜಿಲ್ಲೆಯಲ್ಲಿ ಬೇಲೂರು ತಾಲೂಕಿನಲ್ಲಿ ಹೆಚ್ಚು ಕಾಡಾನೆಗಳ ಹಾವಳಿ ಹಾಗೂ ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಅರಣ್ಯಾಧಿಕಾರಿಗಳಲ್ಲಿ ವಿವರವಾಗಿ ಮಾಹಿತಿ ಪಡೆದಿದ್ದೇನೆ. ಕಾಡಾನೆಗಳ ದಾಳಿ ನಿರಂತರವಾಗಿದ್ದು, ನೈಸರ್ಗಿಕವಾಗಿ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ವಿವಿಧೆಡೆ ಭಾರಿ ಮಳೆಯಿಂದ ಅತಿವೃಷ್ಟಿ ಉಂಟಾಗಿ ಬೆಳೆ ನಷ್ಟವಾಗಿದೆ. ಈ ಬಗ್ಗೆ ಎಲ್ಲ ತಾಲೂಕಿನ ವರದಿ ಪಡೆಯಲಾಗಿದೆ.
ವಿಶೇಷವಾಗಿ ದಿನನಿತ್ಯ ಬೇಲೂರು ಶ್ರೀಚನ್ನಕೇಶವಸ್ವಾಮಿ ದೇಗುಲದಲ್ಲಿನ ಕಪ್ಪೆಚನ್ನಿಗರಾಯ ದೇಗುಲಕ್ಕೆ ಭಕ್ತರು ಭೇಟಿ ನೀಡುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಕಾರಣ ಕಪ್ಪೆಚನ್ನಿಗರಾಯನ ದೇಗುಲಕ್ಕೆ ಇತಿಹಾಸವಿದೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್.ರಾಜೇಗೌಡ, ಶ್ರೀಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹ ಭಟ್ಟರ್, ಪಿಎಸ್‌ಐ ಶಿವನಗೌಡ ಪಾಟೀಲ್, ಎಎಸ್‌ಐ ಶೇಖರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.