

ಹನೂರು: ತಾಲೂಕಿನ ಬಸವಪ್ಪನ ದೊಡ್ಡಿ ಗ್ರಾಮದಲ್ಲಿ ಫೆ.17 ರಂದು ಶ್ರೀ ಕಾತಾಳಿ ಬಸವೇಶ್ವರ ಸ್ವಾಮಿ ಕೊಂಡೋತ್ಸ ನಡೆಯಲಿದ್ದು, ಮುಸ್ಲಿಮರು ಶನಿವಾರ ಕರಪತ್ರವನ್ನು ಹಂಚುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಗ್ರಾಮದಲ್ಲಿ ಎಲ್ಲ ಸಮುದಾಯದ ಜನರು ಒಗ್ಗೂಡಿ ಆಚರಿಸುವ ಸ್ವಾಮಿಯ ಕೊಂಡೋತ್ಸವ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆಚರಿಸಲಾಗುತ್ತಿದ್ದು, ಅಂದು ಬೆಳಗ್ಗೆ 10ಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ವಾದ್ಯಮೇಳದೊಂದಿಗೆ ಶ್ರೀ ಹುಚ್ಚಯ್ಯ ಸ್ವಾಮಿ ಹಾಗೂ ಚನ್ನಯ್ಯ ಒಡೆಯರ ಸ್ವಾಮಿ ಉತ್ಸವ ಮೂರ್ತಿಯನ್ನು ಸಮೀಪದ ಉಡುತೊರೆ ಹಳ್ಳಕ್ಕೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿ ಹಾಲರವಿ ಉತ್ಸವವನ್ನು ನಡೆಸಲಾಗುತ್ತಿದೆ. ಬಳಿಕ ದೇಗುಲದಲ್ಲಿ ಸ್ವಾಮಿಗೆ ಕುಂಬಾಭಿಷೇಕವನ್ನು ನೆರವೇರಿಸಿ ಸಂಜೆ 4 ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಕೊಂಡೋತ್ಸವ ನಡೆಸಲಾಗುತ್ತದೆ. ಈ ವೇಳೆ ಸುತ್ತಮುತ್ತಲ ಹಳ್ಳಿಯ ಜನರು ಭಾಗವಹಿಸುತ್ತಾರೆ.
ಈ ಹಿನ್ನಲೆ ಈ ಭಾಗದ ಮುಸ್ಲಿಮರು ಬಸಪ್ಪನ ದೊಡ್ಡಿ ಸೇರಿದಂತೆ ಕಾಂಚಳ್ಳಿ, ಗುಂಡಾಪುರ ಹಾಗೂ ಮಂಚಾಪುರ ಗ್ರಾಮಕ್ಕೆ ತೆರಳಿ ಮುಖಂಡರನ್ನು ಭೇಟಿಯಾಗಿ ಕರಪತ್ರವನ್ನು ನೀಡುವುದರ ಮೂಲಕ ಕೊಂಡೋತ್ಸವಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಬಸಪ್ಪನದೊಡ್ಡಿ ಮುಸ್ಲಿಂ ಕಮಿಟಿ ಅಧ್ಯಕ್ಷ ಕಲಂದರ್ ಪಾಷ, ಕಾರ್ಯದರ್ಶಿ ಅಕ್ಮಲ್ ಪಾಷ, ಧರ್ಮಗುರು ಫೈರೋಜ್, ಯಜಮಾನ ಉಮ್ಮರ್ ಸಾಹೇಬ್, ಮುಖಂಡರಾದ ಫಯಾಜ್, ಜಮೀರ್ ಪಾಷ, ರಫಿಕ್ ಹಾಗೂ ಇನ್ನಿತರರು ಇದ್ದರು.