

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಕಂಚಿವರದರಾಜಸ್ವಾಮಿ ಮತ್ತು ಹಟ್ಟಿಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಸೆ.8ರಿಂದ ಆರಂಭಗೊಂಡು ಕಳೆದ 3 ದಿನಗಳಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿ ಭಾನುವಾರ ಉತ್ಸವದ ಮೂಲಕ ಅದ್ದೂರಿಯಾಗಿ ತೆರೆಕಂಡಿತು.
ಕಂಚಿವರದರಾಜಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಜರುಗಲಿದ್ದು, ಈ ಬಾರಿಯೂ ಕೊನೇ ಶ್ರಾವಣ ಶನಿವಾರ ಉತ್ಸವ ಹಾಗೂ ಭಾನುವಾರ ಉತ್ಸವದೊಂದಿಗೆ ಜಾತ್ರಾಮಹೋತ್ಸವ ನೆರವೇರಿತು.
ಸೆ.8ರಂದು ಹೂ ಹೊಂಬಾಳೆಯೊಂದಿಗೆ ಕಲ್ಲೂರಮ್ಮದೇವಿಯನ್ನು ವಿಶೇಷ ಪೂಜೆಯೊಂದಿಗೆ ಸ್ವಸ್ಥಾನಕ್ಕೆ ತರುವ ಮೂಲಕ ಆರಂಭವಾದ ಶ್ರಾವಣಮಾಸದ ಜಾತ್ರಾಮಹೋತ್ಸವ, ಶನಿವಾರ ರಾತ್ರಿ ಶ್ರೀಕಂಚಿವರದರಾಜಸ್ವಾಮಿ ಮತ್ತು ಹಟ್ಟಿಮಾರಮ್ಮದೇವಿಯ ಮುತ್ತಿನಪಾಲಕಿ ಉತ್ಸವ ಜರುಗಿತು.
ಮುತ್ತಿನಪಾಲಕಿ ಉತ್ಸವವು ಪಟ್ಟಣದ ರಾಜಬೀದಿಗಳಲ್ಲಿ ಮಂಗಳವಾದ್ಯ ಹಾಗೂ ವೀರಗಾಸೆ ಕುಣಿತದೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಭಾನುವಾರ ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ತಮ್ಮ ಹರಕೆ, ಮುಡಿ ಸೇವೆ ನೆರವೇರಿಸಿ ಪೂಜೆ ಸಲ್ಲಿಸಿದರು.
ಭಾನುವಾರ ಮಧ್ಯಾಹ್ನ ಹಟ್ಟಿಮಾರಮ್ಮದೇವಿಯ ಪ್ರಾಕಾರೋತ್ಸವವು ಮಡೆ, ಆರತಿ, ಭದ್ರಕಾಳಿ ಕುಣಿತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಪೂಜೆ ನೆರವೇರುವ ಮೂಲಕ ಜಾತ್ರಾಮಹೋತ್ಸವ ತೆರೆಕಂಡಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಾಲೂಕು ಮಾತ್ರವಲ್ಲದೆ ಮೈಸೂರು, ಮಂಡ್ಯ, ಭದ್ರಾವತಿ, ಬೆಂಗಳೂರು, ತುಮಕೂರು, ಹಾಸನ, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.