

ಹಾನಗಲ್ಲ: ಶ್ರೀಗಂಧದ ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಿಸುವ ಜಾಲವೊಂದನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ತಾಲೂಕಿನ ಹೀರೂರ ಗ್ರಾಮದ ಶಬ್ಬೀರಹ್ಮದ್ ಮುಳಕೇರಿ (36) ಬಂಧಿತ ಆರೋಪಿ. ಈತ ತಾಲೂಕಿನ ಗಿರಿಸಿನಕೊಪ್ಪ ಗ್ರಾಮದ ಬಳಿ ಶ್ರೀಗಂಧದ ಮರವನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ವೇಳೆ ವಲಯ ಅರಣ್ಯ ಅಧಿಕಾರಿ ಪರಮೇಶ್ವರಪ್ಪ ಪೇಲನವರ ನೇತೃತ್ವದ ತಂಡ ಬಂಧಿಸಿದೆ. ಆರೋಪಿಯನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಚಾರಣೆಯಲ್ಲಿ ಆರೋಪಿ ಅರಣ್ಯ ಇಲಾಖೆ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ತನ್ನ ತಂಡದೊಂದಿಗೆ ಸೆ. 3ರಂದು ಕಡಿದು ಸಾಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀಗಂಧದ ಗಿಡಗಳು ಕಳ್ಳತನವಾಗುತ್ತಿವೆ. ಇದರಲ್ಲಿ ದೊಡ್ಡ ಜಾಲವಿದ್ದು, ಅದನ್ನು ಪತ್ತೆ ಹಚ್ಚಲು ಇಲಾಖೆಯಿಂದ 3 ತಂಡಗಳನ್ನು ನಿಯೋಜಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ ‘ವಿಜಯವಾಣಿಗೆ’ ತಿಳಿಸಿದ್ದಾರೆ.