

ಬಾಗಲಕೋಟೆ: ಗುಡೂರ ಎಸ್ ಸಿ ಗ್ರಾನದಲ್ಲಿ ಮೊಹರಂ ಹಬ್ಬ ಭಾನುವಾರ ಹಿಂದು, ಮುಸ್ಲಿಂ ಸಮಾಜದವರು ಒಂದಾಗಿ ಹಬ್ಬ ಆಚರಿಸಿದರು.
ಲಾಳೆಸಾಬ ಮಸೀದಿ, ಮುಚ್ಚಾಲಿ ಮಸೀದಿ., ಹಿರೇ ಮಸೀದಿ., ರಾಮನಪ್ಪನ ಮಸೀದಿಯಲ್ಲಿ ಕಳೆದ ಒಂದು ವಾರದಿಂದ ಹಬ್ಬದ ಸಾಂಪ್ರದಾಯಿಕ ಆಚರಣೆಗಳು ನಡೆದವು. ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರಿಗೆ ಪೂಜೆ ಸಲ್ಲಿಸಿ ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಹಿಂದೂ ಮುಸ್ಲಿಂ ಬಾಂಧವರು ಹೋಳಿಗೆ, ಚೊಂಗೆ ನೈವೇದ್ಯ ಅರ್ಪಿಸಿದರು. ಹುಲಿ ವೇಷಾಧಾರಿಗಳು ಮೆರವಣಿಗೆ ಆಕರ್ಷಕವಾಗಿತ್ತು. ಅಲಾಯಿ ದೇವರ ಪ್ರತಿಷ್ಠಾಪನೆಯ ಮರುದಿನ ಲಾಸೆಸಾಬ ಮಸೀದಿಯ ಕಾಶೀಂ ದೇವರು ಮತ್ತು ಮೂರನೇಯ ದಿನ ಮುಚ್ಚಾಲಿ ಮಸೀದಿಯ ಲಾಲಸಾಬ ಅಲಿ ದೇವರು ರಾತ್ರಿ ವೇಳೆಯಲ್ಲಿ ಗ್ರಾಮದ ವಿವಿಧ ಬೀದಿಯಲ್ಲಿ ಸಂಚಾರ ನಡೆಸುವುದು ಸಂಪ್ರದಾಯವಾಗಿದೆ. ನಾಲ್ಕನೇ ದಿನ ಸಂಜೆ ಕತ್ತಲ ರಾತ್ರಿ ಆಚರಣೆ ನಡೆದಿದ್ದು., ಅಂದು ಭಕ್ತರು ವಿಶೇಷ ಪೂಜೆಯನ್ನು ಕೈಗೊಂಡರು.
ಮೊಹರ0 ಕೊನೆಯ ದಿನ ಲಾಳೆಸಾಬ ಮಸೀದಿ, ಮಚ್ಚಾಲಿ ಮಸೀದಿಯ ಅಲಾಯಿ ದೇವರು ಹಾಗೂ ಡೋಲಿಯೂ ರಾಮನಪ್ಪನ ಮಸೀದಯತ್ತ ಸೇರಿ ತರಕಾರಿ ಮಾರುಕಟ್ಟೆ, ಬಜಾರ, ಬಸವೇಶ್ವರ ದೇವಾಲಯ, ವಿಜಯ ಮಹಾಂತೇಶ ಮಠ, ಬನಶಂಕರಿ ದೇವಸ್ಥಾನ, ಮಾಬುಸಬಾನಿ ದರ್ಗಾ ಮಾರ್ಗವಾಗಿ ಮೆರವಣಿಗೆ ಸಾಗಿತು. ಯುವಕರು ಅಲಾಯಿ ಹೆಜ್ಜೆ ಕುಣಿತ ಹಾಕಿದರು. ಸಂಜೆ ಸವಾರಿಯ ನಂತರದಲ್ಲಿ ರಿವಾಯಿತ್ ಪದಗಳನ್ನು ಹಾಡುತ್ತಾ ಧಾರ್ಮಿಕ ಸಂಪ್ರದಾಯದ ಮೂಲಕ ಹಬ್ಬದ ಆಚರಣೆಯನ್ನು ಸಂಪನ್ನಗೊಳಿಸಲಾಯಿತು.