

ರಾಜೇಂದ್ರ ಶಿಂಗನಮನೆ ಶಿರಸಿ
ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಜಿಲ್ಲೆಯಾಗಿ ಘೊಷಿಸಿಕೊಂಡಿದ್ದ ಉತ್ತರ ಕನ್ನಡದಲ್ಲಿ ಶೌಚಗೃಹ ನಿರ್ವಣಕ್ಕಾಗಿ ಪ್ರಸಕ್ತ ವರ್ಷ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ!
ಹಳೇ ಸಮೀಕ್ಷೆಯ ಪಟ್ಟಿಯನ್ನು ಆಧರಿಸಿ ಒಡಿಎಫ್ ಡಿಕ್ಲೇರ್ ಮಾಡಿಕೊಂಡಿರುವ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಯನ್ನು ಅವಲಂಬಿಸಿದವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. 11 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಅರ್ಜಿಗಳನ್ನು ಶೂನ್ಯಕ್ಕಿಳಿಸಿ 2019-20ನೇ ಸಾಲಿನಲ್ಲಿ ಒಡಿಎಫ್ಗೆ ಜಿಲ್ಲೆಯನ್ನು ಪರಿಗಣಿಸಲಾಗಿತ್ತು. ಆದರೆ, ಕಳೆದೊಂದು ವರ್ಷದಲ್ಲಿ ಕೌಟುಂಬಿಕ ವಿಭಜನೆ, ವಸತಿ ಯೋಜನೆಗಳ ಫಲಾನುಭವಿಗಳು, ಕೈ ತಪ್ಪಿದ ಕುಟುಂಬಗಳ ಹೆಚ್ಚುವರಿ ಸೇರ್ಪಡೆಗೆ ಅವಕಾಶ ನೀಡಿದ ಮೇಲೆ ಶೌಚಗೃಹ ವಂಚಿತರ ದೊಡ್ಡ ಪಟ್ಟಿ ಬೆಳೆದಿದ್ದು, ಹೊಸ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
1390 ಅರ್ಜಿಗಳು: ಜಿಲ್ಲೆಯು ಬಯಲು ಬಹಿರ್ದೆಸೆಯಿಂದ ಮುಕ್ತವಾಗಿವೆ ಎಂದು ಪ್ರಕಟಿಸಿದ ಬೆಳವಣಿಗೆಯ ನಂತರ ಸಂಬಂಧಪಟ್ಟ ಅಧಿಕಾರಿಗಳು ಫಜೀತಿಗೆ ಸಿಲುಕಿದ್ದರು. ತರಾತುರಿಯಲ್ಲಿ ಪಟ್ಟಿಯಲ್ಲಿದ್ದವರನ್ನು ಡಿಲೀಟ್ ಮಾಡಿ ಗುರಿ ಸಾಧನೆ ಮಾಡಿದ ದೂರುಗಳೂ ಆಗ ಕೇಳಿ ಬಂದಿದ್ದವು. ಇದಕ್ಕೆ ಗ್ರಾಪಂ ವ್ಯಾಪ್ತಿಗಳಲ್ಲಿ ಜನರಿಂದ ಭಾರಿ ವಿರೋಧ ವ್ಯಕ್ತವಾದ ಬಳಿಕ ಹೊಸ ಸೇರ್ಪಡೆಯ ಅವಕಾಶ ನೀಡಲಾಗಿತ್ತು. ಇದರ ಫಲವಾಗಿ ಕಳೆದ 4 ತಿಂಗಳಲ್ಲಿ 1390ಕ್ಕೂ ಹೆಚ್ಚಿನ ಶೌಚಗೃಹ ವಂಚಿತರ ಅರ್ಜಿ ಸ್ವೀಕೃತಗೊಂಡಿವೆ. ಅಗತ್ಯ ದಾಖಲೆಯೊಂದಿಗೆ ಶೌಚಗೃಹ ಕಟ್ಟಿಕೊಡುವಂತೆ ಕೇಳಿದ್ದು, ಬೇಡಿಕೆ ಪಟ್ಟಿ ಬೆಳೆಯುತ್ತಿರುವುದು ಅಧಿಕಾರಿಗಳಲ್ಲಿ ದಿಗಿಲು ಹುಟ್ಟಿಸಿದೆ.
ವರ್ಷದಿಂದ ತಾಪತ್ರಯ: ಕಳೆದೊಂದು ವರ್ಷದಿಂದ ಶೌಚಗೃಹ ಇಲ್ಲದವರು ತಮಗೂ ನಿರ್ವಿುಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದುಂಬಾಲು ಬೀಳುತ್ತಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ ಈ ಹಿಂದೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಿಂದಲೂ ಶೌಚಗೃಹದ ಬೇಡಿಕೆ ಬರುತ್ತಿದೆ. ಇದರಿಂದ ಒಡಿಎಫ್ ಜಿಲ್ಲೆಯಾಗಿ ಘೊಷಿಸಿಕೊಳ್ಳುವಲ್ಲಿ ತರಾತುರಿಯಿಂದ ಅರ್ಹ ಫಲಾನುಭವಿಗಳನ್ನು ಬಿಟ್ಟು ಮುಂದೆ ಸಾಗುತ್ತಿರುವ ಸ್ಥಳೀಯ ಪಂಚಾಯಿತಿ ಕಾರ್ಯಶೈಲಿಯ ಜತೆ ಮೇಲುಸ್ತುವಾರಿ ನೋಡುವ ಜಿಲ್ಲಾ ಪಂಚಾಯಿತಿಯ ನಡೆಯೆಡೆಗೂ ಸಂಶಯ ವ್ಯಕ್ತವಾಗುತ್ತಿದೆ ಎಂಬುದು ಶೌಚಗೃಹಕ್ಕೆ ಅರ್ಜಿ ಸಲ್ಲಿಸಿದ ಹಲವು ಫಲಾನುಭವಿಗಳ ಮಾತಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹ ನಿರ್ಮಾಣ ಸಂಬಂಧ ಈ ಹಿಂದೆ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಕುಟುಂಬ ಕೈತಪ್ಪಿತ್ತು. ಇದೀಗ ಹೊಸ ಸೇರ್ಪಡೆಗೆ ಅವಕಾಶ ನೀಡಲಾಗಿದ್ದು, ಅನುದಾನ ಕಲ್ಪಿಸುವಂತೆ ಅರ್ಜಿ ಸಲ್ಲಿಸಲಾಗಿದೆ. | ಕೃಷ್ಣ ಭೋವಿವಡ್ಡರ ಅರ್ಜಿದಾರಹಿಂದಿನ ಸಮೀಕ್ಷೆ ಆಧರಿಸಿ ಒಡಿಎಫ್ ಪ್ರಕಟಿಸಿದ ನಂತರದಲ್ಲಿ ಹೊಸ ಸೇರ್ಪಡೆಗೂ ಅವಕಾಶ ನೀಡಲಾಗಿತ್ತು. 2021ರಲ್ಲಿ ಈವರೆಗೆ 1390 ಅರ್ಜಿ ಸ್ವೀಕೃತವಾಗಿದೆ. ಫಲಾನುಭವಿಗಳು ಇನ್ನೂ ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ 475 ಅರ್ಜಿದಾರರಿಗೆ ಕಾಮಗಾರಿ ಆದೇಶ ಪತ್ರ ನೀಡಲಾಗಿದೆ. ಉಳಿದವುಗಳನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಅದಕ್ಕೆ ಅನುಮತಿ ಸಿಕ್ಕ ನಂತರ ಉಳಿದ ಅರ್ಜಿದಾರರಿಗೂ ಕಾಮಗಾರಿ ಆದೇಶ ನೀಡಲಾಗುವುದು. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲ ಆಗಲಿದೆ.| ಸೂರ್ಯನಾರಾಯಣ ಭಟ್ಟ ಸ್ವಚ್ಛಭಾರತ ಮಿಷನ್ ಅಧಿಕಾರಿ