ಶೌಚಗೃಹ ಇಲ್ಲದೆ ಪ್ರಯಾಣಿಕರು ಹೈರಾಣ

02
Published on

ಮುಗಳಖೋಡ: ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹ ಮತ್ತು ಮೂತ್ರಿಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಯಲ್ಲಾಲಿಂಗೇಶ್ವರ ಮಠ ಇರುವ ಸುಕ್ಷೇತ್ರ ಮುಗಳಖೋಡಕ್ಕೆ ನಾಡಿನ ಹಾಗೂ ಹೊರರಾಜ್ಯಗಳಿಂದ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಹಿಳೆಯರಿಗೆ ಸರ್ಕಾರದ ಉಚಿತ ಬಸ್ ಸೌಲಭ್ಯದಿಂದ ಹತ್ತು ಪಟ್ಟು ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇಹಬಾಧೆ ತೀರಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರ ಸ್ಥಿತಿಯಂತೂ ಹೇಳತೀರದ್ದಾಗಿದೆ.

ಪಟ್ಟಣದ ಬಸ್ ನಿಲ್ದಾಣ ಹಾಗೂ ಮುಖ್ಯ ಸ್ಥಳಗಳಲ್ಲಿ ಶೌಚಗೃಹಗಳ ಕೊರತೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಸೀಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಂತೂ ಈ ಸಮಸ್ಯೆ ಹೆಚ್ಚಾಗಿಯೇ ಬಾಧಿಸುತ್ತಿದೆ. ಸರ್ಕಾರದ ಬಯಲು ಶೌಚ ಮುಕ್ತ ಎನ್ನುವ ಯೋಜನೆ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಚುನಾಯಿತ ಜನಪ್ರತಿನಿಧಿಳಿಗೆ, ಪುರಸಭೆ ಅಧಿಕಾರಿಗಳಿಗೆ ವ್ಯವಸ್ಥೆ ಸರಿಪಡಿಸುವಂತೆ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದರಿಂದ ಜನರು ಸೌಲಭ್ಯ ವಂಚಿತರಾಗಿಯೇ ಉಳಿಯುವಂತಾಗಿದೆ. 56 ಸದಸ್ಯರನ್ನು ಹೊಂದಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದ ಮುಗಳಖೋಡವನ್ನು 2015ರಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಮೂಲ ಸೌಲಭ್ಯಗಳ ಕೊರತೆ ಮಾತ್ರ ನೀಗಿಲ್ಲ.

ಒಂದು ತಿಂಗಳಲ್ಲಿ ಎಲ್ಲ ಸರಿ ಮಾಡುತ್ತೇವೆ ಎನ್ನುವ ಹಾರಿಕೆ ಉತ್ತರ ಎಂಟು ವರ್ಷಗಳಿಂದ ನಿರಂತರವಾಗಿದೆ. ಆದರೆ, ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ ಎನ್ನುವದು ಸ್ಥಳೀಯರ ಅಳಲು.

ಈಗಾಗಲೇ ಶ್ರೀಮಠದ ಆವರಣದಲ್ಲಿ 30 ರಿಂದ 40 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಮೂರು ತಿಂಗಳಲ್ಲಿ ಬಸ್ ನಿಲ್ದಾಣದಲ್ಲಿ ಶೌಚಗೃಹ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅಲ್ಲಿಯವರೆಗೆ ಸಂಚಾರಿ ಶೌಚಗೃಹ ವ್ಯವಸ್ಥೆ ಮಾಡಲಾಗುವುದು.
ಮಹೇಂದ್ರ ತಿಮ್ಮಾಣಿ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net