

ಚಿಕ್ಕಬಳ್ಳಾಪುರ : ಮರ್ಯಾದೆಗೆ ಅಂಜಿ ಶೋಷಣೆಯನ್ನು ಸಹಿಸಿಕೊಳ್ಳುವ ಧೋರಣೆ ಬಿಡಬೇಕು. ಕಾನೂನಿನಡಿ ರಕ್ಷಣೆ ಪಡೆದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಲೈಂಗಿಕ ದೌರ್ಜನ್ಯ, ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವಂತಹ ವಾತಾವರಣವಿರಬೇಕು. ಅದರಲ್ಲೂ ಮನೆಯನ್ನು ನಿಭಾಯಿಸುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೀಯರಲ್ಲಿ ಸಹೋದ್ಯೋಗಿ ಪುರುಷರು ತಾಯಿ, ಸಹೋದರಿಯರನ್ನು ಕಾಣಬೇಕು ಎಂದರು.
ಮರ್ಯಾದೆಗೆ ಅಂಜಿ ಕೆಲ ಮಹಿಳೆಯರು ಲೈಂಗಿಕ ದೌರ್ಜನ್ಯ, ಕಿರುಕುಳಗಳನ್ನು ಸಹಿಸಿಕೊಳ್ಳುತ್ತಿದ್ದು, ಹಲವರಲ್ಲಿ ಕಾಯ್ದೆಗಳ ಮೂಲಕ ರಕ್ಷಣೆ ಪಡೆಯುವ ಬಗ್ಗೆ ಅರಿವಿಲ್ಲ ಎಂದು ವಿಷಾದಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸಲಾಗಿದೆ. ಆದರೆ, ಇದರಿಂದಲೇ ಎಲ್ಲವನ್ನೂ ಸರಿಪಡಿಸಲಾಗುವುದಿಲ್ಲ. ಕಾನೂನು ನಿಯಮಗಳ ಅರಿವಿನ ಜತೆಗೆ ಸಂಸ್ಕಾರವೂ ಮುಖ್ಯ ಎಂದರು.
ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ವಾತನಾಡಿ, ಒಬ್ಬ ಮಹಿಳೆ ಕುಟುಂಬದಲ್ಲಿ ಮಗಳು, ಅಕ್ಕ ತಂಗಿ, ಹೆಂಡತಿ, ತಾಯಿ ಹೀಗೆ ವಿವಿಧ ಪಾತ್ರಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಾಳೆ. ಯಾವುದೇ ಒಂದು ದೇಶದ ಅಭಿವದ್ಧಿಯನ್ನು ಅಳೆಯುವಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವಯುತ ಸ್ಥಾನಮಾನ ಯಾವ ರೀತಿ ಇದೆ ಎಂಬುದರ ಮೇಲೆ ಅವಲಂಬಿತ ಎಂದಿರುವ ಸ್ವಾಮಿ ವಿವೇಕಾನಂದರ ವಾತನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
ಮನೆಯಿಂದಲೇ ಆರಂಭ
ಸರ್ಕಾರಿ ಕಚೇರಿ ಮಾತ್ರವಲ್ಲದೇ ಖಾಸಗಿ ಸಂಸ್ಥೆಗಳಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಈಗಲೂ ಹೆಣ್ಣಾದವಳು ಕೆಲವು ಕೆಲಸಗಳಿಗೆ ಸೀಮಿತವಾಗಿದ್ದಾಳೆ. ಮನೆಯಿಂದ ಹೊರ ಹೋಗುವಂತಿಲ್ಲ, ಗಂಡು ಎಲ್ಲಿ ಬೇಕಾದರೂ ಹೋಗಿ ಬರಬಹುದು ಎಂಬ ಭಾವನೆ ಅನೇಕ ಕುಟುಂಬಗಳಲ್ಲಿವೆ. ಈ ಭಾವನೆಯಿಂದಲೇ ಶೋಷಣೆ ಶುರುವಾಗುತ್ತದೆ. ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಪ್ರಬಲ ಕಾಯ್ದೆಗಳು ರಚನೆಯಾಗಿರಲಿಲ್ಲ. ಆದರೆ, ಈಗ ಪ್ರತಿ ಹಂತದಲ್ಲೂ ನೆರವು ನೀಡುವ ಕಾನೂನುಗಳಿವೆ. ಇವುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಆರ್. ಲತಾ ಹೇಳಿದರು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸುಪ್ರೀಂ ಕೋರ್ಟ್ ವಕೀಲ ರಿಷಿ ಮದನ್, ಬೆಂಗಳೂರು ಕ್ರೈೈಸ್ಟ್ ಯುನಿವರ್ಸಿಟಿಯ ಎನ್.ಸ್ವಪ್ನಾ, ಬೆಂಗಳೂರು ಆಡಳಿತ ಸಿಐಡಿ ಟಕ ಸಿ.ಜಿ. ರೋಹಿತ್, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ ಮತ್ತಿತರರು ಇದ್ದರು.
ಸಲಹೆ ಸೂಚನೆಗಳು
ಮಹಿಳೆಯರ ಶೋಷಣೆ, ರಕ್ಷಣೆ, ಕಾಯ್ದೆಗಳು ಸೇರಿ ವಿವಿಧ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬೇಟಿ ಬಚಾವೋ, ಬೇಟಿ ಪಡಾವೋ ಸೆಲ್ಫಿ ಕೇಂದ್ರದಲ್ಲಿ ಹಲವರು ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.