

ಕೆ.ಆರ್.ಪೇಟೆ: ಪಟ್ಟಣದಲ್ಲಿ ಸೆ.20ರಂದು ಹಿಂದು ಮಹಾಗಣಪತಿಯ ವೈಭವದ ಮೆರವಣಿಗೆ, ಶೋಭಾಯಾತ್ರೆ ಹಾಗೂ ಸೆ.28ರಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಧ್ಯಕ್ಷತೆಯಲ್ಲಿ ಹಿಂದು, ಮುಸ್ಲಿಂ ಮುಖಂಡರೊಂದಿಗೆ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಸಾಮರಸ್ಯ ಸಭೆ ಇತ್ತೀಚೆಗೆ ನಡೆಯಿತು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೋಮು ಸೌಹಾರ್ದತೆಗೆ ತಾಲೂಕು ರಾಜ್ಯದಲ್ಲೇ ಮಾದರಿಯಾಗಿದೆ. ಹಿಂದುಗಳು ಮತ್ತು ಮುಸ್ಲಿಮರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಯಾವುದೇ ಗಲಾಟೆ ಗದ್ದಲಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಆಚರಿಸುವ ಮೂಲಕ ಮತ್ತೆ ನಾಡಿಗೆ ಹೊಸ ಸಂದೇಶ ನೀಡಬೇಕು ಎಂದು ಮನವಿ ಮಾಡಿದರು.
20ರಂದು ನಡೆಯಲಿರುವ ಹಿಂದು ಮಹಾ ಗಣಪತಿ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರುವ ಸಾಧ್ಯತೆ ಇದೆ. ಬಂದೋಬಸ್ತ್‌ಗಾಗಿ ಮೂರು ಕೆಎಸ್‌ಆರ್‌ಪಿ ತುಕಡಿ , ಡಿಎಆರ್, 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ನಾಗಮಂಗಲ ಡಿವೈಎಸ್‌ಪಿ ಚೆಲುವರಾಜು, ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಆನಂದೇಗೌಡ, ಹಿಂದು ಮಹಾಗಣಪತಿ ಸಮಿತಿ ವ್ಯವಸ್ಥಾಪಕ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ನಟರಾಜು, ಮುಸ್ಲಿಂ ಮುಖಂಡ ಸೌದಿ ಫಯಾಜ್, ಪುರಸಭೆ ಹಿರಿಯ ಸದಸ್ಯ ಡಿ.ಪ್ರೇಮ್‌ಕುಮಾರ್ ಇದ್ದರು.