

ಬಾಗಲಕೋಟೆ: ಮುಧೋಳ ತಾಲೂಕಿನ ಮಹಾಲಿಂಗಪುರ ಹೊರವಲಯದ ತೋಟದ ಶೆಡ್ ಗೆ ಬೆಂಕಿ ಹಚ್ಚಿ ಇಡೀ ಕುಟುಂಬವನ್ನೆ ಸರ್ವನಾಶ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳ ಕೃತ್ಯದಲ್ಲಿ ಸುಟ್ಟುಗಾಯಗೊಂಡಿದ್ದ ೨೭ ವರ್ಷದ ಸುಬಾನ್ ಪೆಂಡಾರಿ ಚಿಕಿತ್ಸೆ ಫಲಿಸದೇ ಗುರುವಾರ ಬೆಳಗಿನ ಜಾವ ೪ ಗಂಟೆಗೆ ಸಾವನ್ನಪ್ಪಿದ್ದಾರೆ. ಇದರಿಂದ ಶೆಡ್ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ.
ಶೆಡ್ ನ ಬಾಲಿಗಿ ಲಾಕ್ ಮಾಡಿ ಪೆಟ್ರೋಲ್ ಸಿಂಪಡಿಸಿ ಬೆಂಕಿ ಹಚ್ಚಿದ್ದ ವೇಳೆ ಈ ಮೊದಲು ತಾಯಿ-ಮಗಳು ಸಜೀವ ದಹನ ಆಗಿದ್ದರು. ಘಟನೆಯಲ್ಲಿ ಮೂವರು ಪಾರಾಗಿದ್ದು, ಅದರಲ್ಲಿ ತಂದೆ ದಸ್ತಗೀರ್ ಸಾಬ್ ಪೆಂಡಾರಿ ಹಾಗೂ ಅವರ ಪುತ್ರ ಸುಬಾನ್ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸುಬಾನ್ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ಈ ವರೆಗೂ ಒಟ್ಟು ೮ ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಹೊಸದಾಗಿ ವಶಕ್ಕೆ ಪಡೆದಿರುವ ನಾಲ್ವರು ಆರೋಪಿಗಳು ಸೆಡ್ ಗೆ ಬೆಂಕಿ ಹಚ್ಚಿರುವ ಘಟನೆ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಈ ದುಷ್ಕೃತ್ಯಕ್ಕೆ ಕೌಟುಂಬಿಕ ಸಮಸ್ಯೆ ಜೊತೆಗೆ ಅನೈತಿಕ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಇದೇ ದ್ವೇಷದಿಂದ ಇಡೀ ಕುಟುಂಬವನ್ನು ನಾಶಪಡಿಸುವ ಉದ್ದೇಶದಿಂದ ದುಷ್ಕರ್ಮಿಗಳು ಶೆಡ್ ಗೆ ೧೦೦ ಲೀಟರ್ ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿಕೊಂಡು ಎರಡು ಎಚ್ಪಿ ಮೋಟಾರ್ ಮೂಲಕ ಶೆಡ್ ಗೆ ಸಿಂಪರಣೆ ಮಾಡಿ ಬೆಂಕಿ ಹಚ್ಚಿದ್ದರು. ಈ ವೇಳೆ ದಸ್ತಗೀರಸಾಬ್ ಪೆಂಡಾರಿ ಸೇರಿದಂತೆ ಒಟ್ಟು ಐವರು ಶೆಡ್ ನಲ್ಲಿ ಮಲಗಿದ್ದರು. ಇದರಲ್ಲಿ ಜೈನಾಬಿ ಹಾಗೂ ಶಬಾನಾ ಇಬ್ಬರು ಸಜೀವ ದಹನವಾಗಿದ್ದರು. ಸಿದ್ದಿಕಿ ಹೊರಗಡೆ ಬಂದ ಜೀವ ಉಳಿಸಿಕೊಂಡಿದ್ದು, ದಸ್ತಗೀರಸಾಬ್ ಹಾಗೂ ಸುಬಾನ್ ಗಂಭೀರ ಗಾಯಗೊಂಡಿದ್ದರು. ಇದೀಗ ಸುಬಾನ್ ಸಾವನ್ನಪ್ಪಿದ್ದಾನೆ.
ಸುಬಾನ್ ಅನೈತಿಕ ಸಂಬಂಧ ಹೊಂದಿದ್ದು, ಈತನ ಮೇಲಿನ ದ್ವೇಷ ಇಡೀ ಕುಟುಂಬಕ್ಕೆ ತಿರುಗಿ ಇಷ್ಟೆಲ್ಲ ದೊಡ್ಡ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಅನೈತಿಕ ಸಂಬಂಧದ ವಿರುದ್ಧ ಕೌಟುಂಬಿಕ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯೂ ಈ ಕೊಲೆಯ ಹಿಂದಿನ ದ್ವೇಷಕ್ಕೆ ಕಾರಣ ಎನ್ನಲಾಗುತ್ತಿದೆ.
ಗುರುವಾರ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಮತ್ತೆ ಸ್ಥಳಕ್ಕೆ ತೆರಳಿ, ವಶಕ್ಕೆ ಪಡೆದಿರುವ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯಲ್ಲಿ ಇನ್ನು ಕೆಲವರು ಭಾಗಿ ಆಗಿರುವ ಶಂಕೆ ಇದ್ದು, ತನಿಖೆ ತೀವ್ರಗತಿಯಲ್ಲಿ ಸಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.