

ಕಾರವಾರ: ತಾಲೂಕಿನ ವಿವಿಧ ಶಿವ ದೇವಸ್ಥಾನಗಳಲ್ಲಿ ಶುಕ್ರವಾರ ಶ್ರದ್ಧೆ ಭಕ್ತಿಯಿಂದ ಶಿವ ಪೂಜೆ ನೆರವೇರಿಸಲಾಯಿತು.
ಶೇಜವಾಡದ ಶೆಜ್ಜೇಶ್ವರ ಸನ್ನಿಧಿಯಲ್ಲಿ ಬೆಳಗಿನಿಂದಲೇ ಅಭಿಷೇಕ ಹಾಗೂ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಚಪ್ಪರ ಹಾಕಿ, ಅಭಿಷೇಕಕ್ಕೆ ಸಂಕಲ್ಪ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಭಕ್ತರಿಗೆ ಫಲಾಹಾರ ನೀಡಲಾಯಿತು. ಇಡೀ ದಿನ ಭಜನೆ, ರಾತ್ರಿ ಶತ ರುದ್ರಾಭಿಷೇಕ ನೆರವೇರಿತು.
ನಗರದ ಮಹಾದೇವ, ಕಾಲರುದ್ರೇಶ್ವರ, ಕಡವಾಡದ ಮಹಾದೇವ ಸೇರಿ ಎಲ್ಲ ಶಿವಾಲಯಗಳಲ್ಲೂ ವಿಶೇಷ ಪೂಜೆ, ಅರ್ಚನೆ ನಡೆಸಲಾಯಿತು.
ಇಡೀ ದಿನ ಸಂಗೀತ ಕಾರ್ಯಕ್ರಮ: ಬಾಡ ಮಹಾದೇವ ದೇವಸ್ಥಾನದಲ್ಲಿ ಗೆಳೆಯರ ಬಳಗದಿಂದ ನಿರಂತರ 12 ತಾಸು ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ರವರೆಗೂ 12 ಕಲಾವಿದರು ಹಾಡಿದರು.
ಪಂಡಿತ ದಿನಕರ ಗಡಕರ್, ಅಶೋಕ ಶೆಟ್ಟಿ, ವಿಲಾಸ ರೇವಣಕರ್, ಸಂಗೀತಾ ಬಾಂದೆಕರ್, ಮೀನಾಕ್ಷಿ ಪಾಟೀಲ್, ಮಹೇಶ ಭಟ್, ಕೇದಾರ ವೈಂಗಣಕರ್, ಸಾಯಿಷಾ ಶೇಟ್, ಪದ್ಮಜಾ ಜೋಯಿಸ್, ಉಲ್ಲಾಸ ಬೋವಿ, ಸಂಕೇತ ಸಪ್ರೆ, ರಾಮ ಬಾಂದೇಕರ್ ಅವರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಗೆಳೆಯರ ಬಳಗದಿಂದ ಸಂಗೀತ ಶಿಕ್ಷಕರನ್ನು ಸನ್ಮಾನಿಸಲಾಯಿತು. ದಿನೇಶ ಗಡಕರ್, ಚಂದ್ರಕಾಂತ ಗಡಕರ್, ಕೃಷ್ಣಾನಂದ ಗುರವ್, ಮಾರುತಿ ನಾಯ್ಕ ಇಡಗುಂಜಿ, ಗಣಪತಿ ಹೆಗಡೆ ಹೊನ್ನಾವರ, ರಾಮ ಬಾಂದೆಕರ್, ಅಶೋಕ ಶೆಟ್ಟಿ, ಸಂಗೀತಾ ಬಾಂದೆಕರ್, ಶ್ಯಾಮಲಾ ಭಟ್ ಅವರನ್ನು ಸನ್ಮಾನಿಸಲಾಯಿತು.
ಗೆಳೆಯರ ಬಳಗದ ಎಂ.ಪಿ.ಕಾಮತ್, ಪರಮೇಶ್ವರ ಭಟ್ಟ ಇದ್ದರು.