ಶುಶ್ರೂಷಣಾಧಿಕಾರಿ ವಿರುದ್ಧ ಪ್ರತಿಭಟನೆ

8spt1
Published on

ಸೋಮವಾರಪೇಟೆ: ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಹಾಗೂ ಬೆಟ್ಟದಳ್ಳಿ ಗ್ರಾಮಸ್ಥರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಂಪತ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಶುಶ್ರೂಷಣಾಧಿಕಾರಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅರೋಗ್ಯಾಧಿಕಾರಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಶುಶ್ರೂಷಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿದ್ಯಾಸಂಸ್ಥೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಕಳೆದ ಏಳು ವರ್ಷಗಳಿಂದ ಶುಶ್ರೂಷಣಾಧಿಕಾರಿ ಅವರು ಯಾವುದೇ ಲೋಪಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ವರದಿಯನ್ನು ತನಿಖಾ ತಂಡ ನೀಡಿದೆ. ಶಾಲಾ ಜಾಗದ ವಿಷಯಕ್ಕೆ ಈ ಪ್ರಕರಣ ನಡೆಯುತ್ತಿದೆ ಎಂಬ ಮಾಹಿತಿಯೂ ಮೇಲಧಿಕಾರಿಗಳಿಗೆ ರವಾನೆಯಾಗಿದೆ. ಏಕಾಏಕಿ ಶುಶ್ರೂಷಣಾಧಿಕಾರಿ ವಿರುದ್ಧ ಇಲಾಖಾ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ದೂರಿನ ಬಗ್ಗೆ ಮೇಲಧಿಕಾರಿಗಳಿಗೂ ತಿಳಿಸಲಾಗಿದೆ. ಅಲ್ಲಿಂದ ಅದೇಶ ಬಂದ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಡಾ.ಸತೀಶ್ ಕುಮಾರ್ ಹೇಳಿದರು.

ಅಧಿಕಾರಿಯ ಸಮಜಾಯಿಷಿಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಗ್ರಾಮದ ಜನರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಶುಶ್ರೂಷಣಾಧಿಕಾರಿ ಅವರನ್ನು ವರ್ಗಾವಣೆ ಮಾಡದಿದ್ದರೆ, ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾಕಾರರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಶುಶ್ರೂಷಣಾಧಿಕಾರಿ ಅವರನ್ನು ವರ್ಗಾವಣೆಗೊಳಿಸಲಾಗುವುದು ಎಂದು ಡಿಎಚ್‌ಒ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಮಂತರ್‌ಗೌಡ, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು. ಸೂಕ್ತ ತನಿಖೆ ನಡೆಸಿ ಒಂದು ವಾರದ ಒಳಗೆ ಮಾಹಿತಿ ನೀಡುವಂತೆ ಡಿಎಚ್‌ಒ ಅವರಿಗೆ ಸೂಚಿಸಿದರು. ತಹಸೀಲ್ದಾರ್ ಕೃಷ್ಣಮೂರ್ತಿ, ಟಿಎಚ್‌ಒ ಡಾ.ಇಂದೂಧರ್ ಇದ್ದರು. ಪ್ರತಿಭಟನೆಯಲ್ಲಿ ಬೆಟ್ಟದಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಣಾಧಿಕಾರಿಯಾದ ಡಿ.ಜೆ.ಮೋಹನಾಕ್ಷಿ ಹಾಗೂ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ನಡುವೆ ಶಾಲಾ ಜಾಗದ ವಿಚಾರವಾಗಿ ಘರ್ಷಣೆ ನಡೆದು, ಸೋಮವಾರಪೇಟೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಗ್ರಾಮಸ್ಥರಿಗೆ ಅಪಾಯಕಾರಿ ಲಸಿಕೆ ನೀಡಿ, ಸಾರ್ವಜನಿಕರನ್ನು, ಗ್ರಾಮಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ದೂರನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ನೀಡಿ, ಕಾನೂನು ಕ್ರಮಕ್ಕೆ ಆಗ್ರಹಿಸುತ್ತ ಬಂದಿದ್ದಾರೆ. ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಪ್ರಕರಣ ಸಮಗ್ರ ತನಿಖೆಯಾಗುವವರೆಗೆ ಶುಶ್ರೂಷಣಾಧಿಕಾರಿ ಮೋಹನಾಕ್ಷಿ ಅವರನ್ನು ಕುಶಾಲನಗರ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಡಾ.ಸತೀಶ್‌ಕುಮಾರ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಡಿಕೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net