ಶುಲ್ಕದ ಹಣ ದುರ್ಬಳಕೆ ಪ್ರಕರಣ ಸಿಬಿಐ ತನಿಖೆಗೆ

cbi
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಭಾಗಿತ್ವ ಸಂಸ್ಥೆಗಳು 2009ರಿಂದ 2016ರ ನಡುವೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕದ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಸಿಬಿಐ ತನಿಖೆ ನಡೆಸುವಂತೆ ಖುದ್ದು ರಾಜ್ಯಪಾಲರೇ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ದೇಶಾದ್ಯಂತ ಇರುವ 203 ಸಹಭಾಗಿತ್ವ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕದ ಹಣವನ್ನು ಮುಕ್ತ ವಿವಿಗೆ ವರ್ಗಾವಣೆ ಮಾಡಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅಂದಾಜು 250 ಕೋಟಿ ರೂ. ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ವಿಷಯದ ಕುರಿತು ಮುಕ್ತ ವಿವಿ ಕುಲಸಚಿವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 2009-10ರಿಂದ 2015-16ರ ಅವಧಿಯಲ್ಲಿ ಸಹಭಾಗಿತ್ವ ಸಂಸ್ಥೆಗಳು ವಿವಿಧ ಕೋರ್ಸ್​ಗಳಿಗೆ ದಾಖಲಾದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ವಹಿಸಲು ರಾಜ್ಯಪಾಲರು ಮತ್ತು ಮುಕ್ತ ವಿವಿ ಕುಲಪತಿ ಬಯಸಿದ್ದಾರೆ. ಹೀಗಾಗಿ, ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರತಿಭಾ ಡಿ.ಹಬ್ಬು ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಏ.7ರಂದು ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ.

ಆಗಿರುವುದೇನು?: ಈ ಅವಧಿಯಲ್ಲಿ ಮುಕ್ತ ವಿವಿ ಕುಲಪತಿಯಾಗಿ ಕೆ.ಎಸ್.ರಂಗಪ್ಪ (2009ರಿಂದ 2012) ಮತ್ತು ದಿವಂಗತ ಪ್ರೊ.ಎಂ.ಜಿ.ಕೃಷ್ಣನ್(2012ರಿಂದ 2016) ಕಾರ್ಯನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲೇ ಸಹಭಾಗಿತ್ವ ಸಂಸ್ಥೆಗಳ ಸಂಖ್ಯೆ ಏರಿಕೆ ಕಂಡಿತ್ತು. ಇವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಅಂದರೆ 2009ರವರೆಗೆ ಕೇವಲ 6 ಸಹಭಾಗಿತ್ವ ಸಂಸ್ಥೆಗಳಿದ್ದವು. ಬಳಿಕ ಇವುಗಳ ಸಂಖ್ಯೆ 200ಕ್ಕೆ ಹೆಚ್ಚಾಯಿತು. ದೇಶದ ವಿವಿಧ ಭಾಗದಲ್ಲಿರುವ ನಾನಾ ಸಂಸ್ಥೆಗಳೊಂದಿಗೆ ಮುಕ್ತ ವಿವಿ ಒಡಂಬಡಿಕೆ ಮಾಡಿಕೊಂಡು ದೂರ ಶಿಕ್ಷಣ ನೀಡಲು ಪ್ರಾರಂಭಿಸಿತ್ತು. ಆದರೆ, ಇಂತಹ ಬಹುತೇಕ ಸಂಸ್ಥೆಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಇರಲಿಲ್ಲ. ಕನಿಷ್ಠ ಕಟ್ಟಡವೂ ಇರದ ಉದಾಹರಣೆಗಳಿವೆ. ಆದಾಗ್ಯೂ, ಪೂರ್ವಾಪರ ಪರಿಶೀಲನೆ ಮಾಡದೆ ಈ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಇವು ಮುಕ್ತ ವಿವಿಗೆ ವಂಚಿಸಿ ವಿದ್ಯಾರ್ಥಿಗಳ ಶುಲ್ಕದ ಹಣವನ್ನೇ ಕಬಳಿಸಿವೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳಿಂದ ಮೂರು ಪ್ರಕಾರದ ಶುಲ್ಕವನ್ನು ಸಂಗ್ರಹಿಸಲು ಈ ಸಂಸ್ಥೆಗಳಿಗೆ ಮುಕ್ತ ವಿವಿ ಅವಕಾಶ ನೀಡಿತ್ತು. ಕೋರ್ಸ್ ಮಂಜೂರಾತಿ, ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕ ಇದಾಗಿತ್ತು. ಈ ಎಲ್ಲ ಸಹಭಾಗಿತ್ವ ಸಂಸ್ಥೆಗಳು ದೇಶದ ಮೂಲೆ ಮೂಲೆಯಲ್ಲಿವೆ. ಇವುಗಳ ಬ್ಯಾಂಕ್ ಖಾತೆಯಿಂದ ಹಿಡಿದು ವಿವಿಧ ದಾಖಲಾತಿಗಳನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಇದು ಮುಕ್ತ ವಿವಿಯಿಂದ ಆಗುವ ಕೆಲಸವಲ್ಲ. ಹೀಗಾಗಿ, ಸಿಬಿಐ ತನಿಖೆ ನಡೆಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಕ್ತ ವಿವಿ ಮೂಲಗಳು ತಿಳಿಸಿವೆ.

76 ಕೋಟಿ ರೂ. ಅವ್ಯವಹಾರ: ಮುಕ್ತ ವಿವಿಯಿಂದ ಈಗಾಗಲೆ ಆಂತರಿಕವಾಗಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಸಂದರ್ಭದಲ್ಲಿ 76 ಕೋಟಿ ರೂ. ಶುಲ್ಕದ ಅವ್ಯವಹಾರ ಕಂಡುಬಂದಿದೆ. 250 ಕೋಟಿ ರೂ.ಗೂ ಅಧಿಕ ಹಣ ದುರುಪಯೋಗ ಆಗಿರುವ ಸಾಧ್ಯತೆ ಇದೆ. ಇದೆಲ್ಲ ಸಿಬಿಐ ತನಿಖೆಯಿಂದ ಹೊರಬರಲಿದೆ ಎಂದು ಮುಕ್ತ ವಿವಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net