

ಶಿರಸಿ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಶುಂಠಿ ಬೆಳೆಗೆ ಹಳದಿ ಕೊಳೆರೋಗ ತಗುಲಿದೆ. ಇದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಆತಂಕಗೊಂಡಿದ್ದಾರೆ.
ಕಳೆದ ಕೃಷಿ ಹಂಗಾಮಿನಲ್ಲಿ ಶುಂಠಿಗೆ ಉತ್ತಮ ಬೆಲೆ ಬಂದ ಕಾರಣ ಅರೆ ಬನವಾಸಿ ಹೋಬಳಿಯಾದ್ಯಂತ 650 ಎಕರೆಗೂ ಹೆಚ್ಚು ಕ್ಷೇತ್ರದಲ್ಲಿ ಸಾವಿರಾರು ರೈತರು ಶುಂಠಿಯನ್ನು ಹೆಚ್ಚಾಗಿ ನಾಟಿ ಮಾಡಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಗಿ ನಾಟಿ ಮಾಡಿದ ಶುಂಠಿ ಬೆಳೆ ಸಮೃದ್ಧವಾಗಿ ಬೆಳೆದಿತ್ತು. ಹೀಗಾಗಿ, ಬೆಳೆಗಾರರು ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ, ವಾರದಿಂದ ಬಿದ್ದ ನಿರಂತರ ಮಳೆಯಿಂದ ಶುಂಠಿ ಬೆಳೆದ ಜಮೀನಿನಲ್ಲಿ ನೀರು ನಿಂತು ಹಳದಿ ಕೊಳೆರೋಗ ವ್ಯಾಪಕವಾಗಿ ಹರಡುತ್ತಿದೆ. ಮಳೆ ಹೆಚ್ಚಾದ ಕಾರಣ ಬ್ಯಾಕ್ಟಿರಿಯಲ್ ವಿಲ್ಟ್, ಪಿಜೋರಿಯಂ ವಿಲ್ಟ್ ಎಂಬ ಕೀಟಾಣುಗಳ ದಾಳಿಯಿಂದ ಬೆಳೆ ಕೊಳೆಯಲು ಆರಂಭಿಸಿದೆ.
ಬನವಾಸಿ, ಅಂಗಡಿ, ಸಂತೊಳ್ಳಿ, ವದ್ದಲ, ಕಾಳಂಗಿ, ಮಧುರವಳ್ಳಿ ಸೇರಿ ಹೋಬಳಿಯ ಬಹುತೇಕ ಕಡೆ ಶುಂಠಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಹಂತ ಹಂತವಾಗಿ ಇಡೀ ಬೆಳೆಯನ್ನು ಈ ರೋಗ ಆಕ್ರಮಿಸುತ್ತಿರುವುದು ಬೆಳೆಗಾರರನ್ನು ಹೈರಾಣಾಗಿಸಿದೆ.
ಕೀಟನಾಶಕ ದುಬಾರಿ: ಶುಂಠಿಗೆ ತಗುಲಿರುವ ಕೊಳೆ ರೋಗಕ್ಕೆ ಸ್ಥಳೀಯವಾಗಿ ಕ್ವಿನಾಲ್ ಫಾಸ್ಟ್, ಮಾನೋಕ್ಟೇರಿ ಫಾಸ್ಟ್ಲಿಂಡನ್ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಇದರ ಬೆಲೆ ದುಬಾರಿ ಕೂಡ. ಆದರೆ, ಮಳೆ ಬಿಡುವು ನೀಡದೆ ಸುರಿಯುತ್ತಿರುವ ಕಾರಣ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಬೆಳೆಗಾರರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಶುಂಠಿ ಗಿಡಕ್ಕೆ ಕೊಳೆ ರೋಗ ಬಂದರೆ ಅದು ಇಡೀ ಗದ್ದೆಯನ್ನೇ ಆಕ್ರಮಿಸುತ್ತದೆ. ಕೊಳೆ ರೋಗದಿಂದ ಶುಂಠಿಯ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ, ಶುಂಠಿಯ ಗಡ್ಡೆಗಳು ಬೆಳವಣಿಗೆ ಆಗುವುದಿಲ್ಲ. ಇದರಿಂದಾಗಿ ಸಾಲ ಮಾಡಿ ಶುಂಠಿ ಮಾಡಿದ ರೈತರು ದಿಕ್ಕು ತೋಚದಂತಾಗಿದ್ದಾರೆ.
ಕರೊನಾ ಕಾರಣಕ್ಕೆ ಕಾರ್ವಿುಕರ ಕೊರತೆ ನಡುವೆಯೂ ದುಪ್ಪಟ್ಟು ವೇತನ ನೀಡಿ ಕಾರ್ವಿುಕರನ್ನು ಕರೆತಂದು ನಿಗದಿತ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಶುಂಠಿ ಬಿತ್ತನೆ ದಿನದಿಂದಲೂ ನಿರ್ವಹಣೆ, ಕೂಲಿ, ಕೀಟನಾಶಕ ಸಿಂಪಡಣೆಗೆ ಹೆಚ್ಚು ಹಣ ವ್ಯಯಿಸಲಾಗಿದೆ. ರೈತರು ಸಾಲ ಮಾಡಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಕೊಳೆರೋಗ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಒಂದೊಮ್ಮೆ ಕೊಳೆಯಿಂದ ಬೆಳೆ ನಷ್ಟವಾದರೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.| ನಾರಾಯಣ ನಾಯ್ಕದಾಸನಕೊಪ್ಪ ಶುಂಠಿ ಕೃಷಿಕ
ಶುಂಠಿ ಮಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ರೋಗ ನಿಯಂತ್ರಣಕ್ಕಾಗಿ ರಿಡೋಮಿಲ್ ಅನ್ರೆಡ್ 2 ಮಿ.ಗ್ರಾಂ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಕೊಳೆರೋಗ ಬಂದ ಗಿಡದ ಬುಡದಲ್ಲಿ ಹಾಕಬೇಕು. ಉಳಿದೆಡೆ ಬ್ಲೈಟಾಕ್ಸ್ ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಗದ್ದೆಯಲ್ಲಿನ ಶುಂಠಿ ಗಡ್ಡೆಯ ಬುಡಕ್ಕೂ ಸಿಂಪಡಿಸಬೇಕು.| ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ