ಶೀಘ್ರದಲ್ಲೇ ಜಗಜೀವನ ರಾಮ್ ಭವನ ನಿರ್ಮಾಣ

mgd
Published on

ಮಾಗಡಿ : ಪಟ್ಟಣದಲ್ಲಿ ಸೂಕ್ತ ಕಡೆ ಜಗಜೀವನ ರಾಮ್ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಾಬೂಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಾಬೂಜಿ ಅವರು ಅಧಿಕಾರದಲ್ಲಿದ್ದಾಗ ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸಿಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಎರಡು ಕಣ್ಣುಗಳಿದ್ದಂತೆ. ತುಳಿತಕ್ಕೆ ಒಳಗಾದ ಜನರು ಸಮಾಜಮುಖಿಯಾಗಿ ಮುಖ್ಯವಾಹಿನಿಗೆ ಬರಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಕೊಟ್ಟ ಕೊಡುಗೆಗಳಿಂದ ತುಳಿತಕ್ಕೆ ಒಳಗಾದವರು ಇಂದಿಗೂ ಜೀವಂತವಾಗಿದ್ದಾರೆ ಎಂದರು.

ದೇಶದಲ್ಲಿ ಆಹಾರದಿಂದ ಬಳಲುವ ವೇಳೆ ಹಸಿರು ಕ್ರಾಂತಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸೂರ್ಯ-ಚಂದ್ರ ಇರುವ ತನಕ ಯಾರು ಮರೆಯಲು ಸಾಧ್ಯವಿಲ್ಲ. ಜಗಜೀವನರಾಮ್ ಅವರು ಆಡಳಿತ ನಡೆಸದ ಇಲಾಖೆಗಳಿಲ್ಲ. ಅಂತಹ ಪುಣ್ಯ ಪುರುಷರು ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಮಾತ್ರ ಇಂತಹ ಮಹನೀಯರ ಜಯಂತಿಗೆ ಅರ್ಥ ಬರಲಿದೆ ಎಂದರು.

ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಂತರ ಎಲ್ಲರೂ ಚರ್ಚಿಸಿ ಏ.25 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದಾಗಿ ತಿಳಿಸಿದರು.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಾಬು ಜಗಜೀವನರಾಮ್ ಅವರ ಭಾವಚಿತ್ರ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಇದನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದಾಗಿ ತಹಸೀಲ್ದಾರ್ ಶರತ್ ಕುಮಾರ್‌ಗೆ ಸೂಚಿಸಿದರು.

ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ,ಅಂಬೇಡ್ಕರ್, ಬಾಬೂಜಿ ಅವರು ನಾಣ್ಯದ ಎರಡು ಮುಖವಿದ್ದಂತೆ, ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಸಾಧನೆ, ಸಮಾಜಕ್ಕೆ ಕೊಟ್ಟ ಆದರ್ಶ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಮಂಜೇಶ್ ಕುಮಾರ್, ರಂಗಹನುಮಯ್ಯ, ಸಿ.ಜಯರಾಮು, ನರಸಿಂಹ ಮೂರ್ತಿ, ಕೃಷ್ಣ, ದೊಡ್ಡಿ ಲಕ್ಷ್ಮಣ, ಬೆಂಕಿ ಮಹದೇವ್, ವನಜಾ, ಚಿಕ್ಕರಾಜು, ಉಮೇಶ್, ತಟವಾಳು ಪ್ರಕಾಶ್, ಜೀವಿಕ ಗಂಗಹನುಮಯ್ಯ, ಗೋಪಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net