

ಬಾಗಲಕೋಟೆ: ಮಹಿಳೆಯರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ದಿ ನಿಗಮದಿಂದ ಶೀಘ್ರದಲ್ಲಿಯೇ 1 ಲಕ್ಷ ರೂ.ಗಳವರೆಗೆ ಕಿರು ಸಾಲ ಸೌಲಭ್ಯವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಬಿವೃದ್ದಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಭಿವೃದ್ದಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು ಸರಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಲಕ್ಷ ರೂ.ಗಳ ಕಿರು ಸಾಲ ಯೋಜನೆಯಿಂದ ಮತ್ತಷ್ಟು ಆರ್ಥಿಕವಾಗಿ ಸಬರಾಗಲು ಅನುಕೂಲವಾಗಲಿದೆ. ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಅಧಿಕಾರಿ ವರ್ಗದ ಆಸಕ್ತಿ ಮತ್ತು ಕಾಳಜಿ ಸಕರಾತ್ಮಕವಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವದೆಂದು ತಿಳಿಸಿದರು.
ಮಹಿಳೆಯರ ಸ್ವಾವಲಂಬಿ ಬದುಕು ನಡೆಸಲು ಸರಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಅಬಿವೃದ್ದಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇವದಾಸಿ ಪುನರ್ವಸತಿ ಯೋಜನೆಯಡಿ, ದೇವದಾಸಿಯರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಮಾಜಿ ದೇವದಾಸಿಯರಿಗೆ ನೀಡುವ ಮಾಸಿಕ ಪಿಂಚಣಿ ಮೊತ್ತವನ್ನು 1500 ರೂ.ಗಳಿಂದ 2 ಸಾವಿರ ರೂ.ಗಳವರೆಗೆ ಹೆಚ್ಚಿಸಲಾಗಿದೆ. ಹಾಗೆಯೇ ದೇವದಾಸಿಯರ ಸಮಗ್ರ ಸಮೀಕ್ಷೆಯನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಇದರಿಂದ ವಂಚಿತ ದೇವದಾಸಿಯರಿಗೂ ಸರಕಾರದ ಯೋಜನೆಗಳು ತಲುಪಿಸುವ ಕಾರ್ಯ ಆಗಲಿದೆ ಎಂದರು.
ದೇವದಾಸಿಯರು ಮತ್ತು ತೃತೀಯ ಲಿಂಗಿಗಳು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಹೆಸರನ್ನು ಸಂಬಂಧಪಟ್ಟ ಸಮೀಕ್ಷೆಯಲ್ಲಿ ನೋಂದಾಯಿಸಬೇಕು. ಅಂದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ. ಸಮೀಕ್ಷೆಗಳಿಂದ ಇನ್ನು ಹೆಚ್ಚಿನ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ್ ಹೂಗಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಸಾಕಷ್ಟಿದ್ದು, ನೀವಷ್ಟೇ ಯೋಜನೆಗಳನ್ನು ಪಡೆಯದೇ ಇತರರಿಗೂ ಅದರ ಮಾಹಿತಿ ಹಂಚಬೇಕು. ಸೂಕ್ತ ದಾಖಲೆ ಸಹಿತ ನೀವು ಒಂದು ಹೆಜ್ಜೆ ಮುಂದಿಟ್ಟರೇ ನಾವು ಕೂಡ ಒಂದು ಹೆಜ್ಜೆ ಮುಂದೆ ಬಂದು ನಿಮಗೆ ಸಾಲ ಕೊಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಉದ್ಯೋಗಿನಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ವ್ಯವಸ್ಥಾಪಕರಾದ ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಮಲತಾ ಹಿರೇಮನಿ, ಮಂಜುನಾಥ್ ಪರಸನ್ನವರ್ ಮತ್ತು ಎಲ್ಲ ತಾಲೂಕು ಸಿಡಿಪಿಒಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.