

ಬಳ್ಳಾರಿ: ಶಿಸ್ತು ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್‌ಕುಮಾರ್ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನ ಬಳಿ ಇರುವ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.
ನಾಗರಿಕ ಬಂದೂಕು ತರಬೇತಿ ಪಡೆದವರು ಮುಂದೆ ಬಂದೂಕು ಪರವಾನಗಿ ಪಡೆದುಕೊಳ್ಳಬಹುದು. ತರಬೇತಿ ಜತೆಗೆ ಹೆಲ್ಮೆಟ್ ಜಾಗೃತಿ, ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯ ಮಾಡಿದ್ದು ಶ್ಲಾಘನೀಯ . ತರಬೇತಿ ಪಡೆದ ನಾಗಕರಿಕರು ಪೊಲೀಸ್ ಪ್ರತಿನಿಧಿಗಳಿದ್ದಂತೆ ಎಂದು ನುಡಿದರು.
ಎಸ್ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಕಳೆದ 12 ದಿನಗಳ ಕಾಲ ನಾಗರಿಕರು ಬಂದೂಕು ತರಬೇತಿ ಪಡೆದಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಎಎಸ್ಪಿ ನಟರಾಜ್ ಎಂ.ಎ. ಮಾತನಾಡಿ, ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಜಿ.ಎನ್.ತಿಪ್ಪೇಸ್ವಾಮಿ, ಶೇಖರಪ್ಪ, ಇನ್‌ಸ್ಪೆಕ್ಟರ್‌ಗಳಾದ ಗೋವಿಂದ್, ಸಿದ್ದರಾಮೇಶ್ವರ ಗಡೇದ, ಅಮೋಘ್ ಆರ್.ಪಿ, ಸುಭಾಸ್‌ಚಂದ್ರ, ಉಮೇಶ್, ನಾಗರಾಜ್ ಇತರರಿದ್ದರು.
ವಿಜೇತರಿಗೆ ಬಹುಮಾನ ವಿತರಣೆ: ರೈಫಲ್ ಶೂಟಿಂಗ್‌ನಲ್ಲಿ ಶಿಬಿರಾರ್ಥಿ ಕಿರಣ್‌ಕುಮಾರ್ ಮತ್ತು ಪಿ.ಮೋದಿನ್ ಬಾಷಾ ಉತ್ತಮ ಗುರಿಕಾರರಾಗಿ ಪ್ರಥಮ ಸ್ಥಾನ ಪಡೆದರು.
ಎಸ್.ಡಿ.ನರಸಿಂಹರೆಡ್ಡಿ, ಎಚ್.ಹುಲಗಪ್ಪ (ದ್ವಿತೀಯ), ಚಂದ್ರಶೇಖರ್, ಗಿರೀಶ್ ಎಂ.ಆರ್ ಹಾಗೂ ಟಪಾಲ್ ಭೂಪೆನ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಐಜಿಪಿ ಲೋಕೇಶ್ ಕುಮಾರ್ ಬಹುಮಾನ ನೀಡಿದರು.