More

    ಮಕ್ಕಳಲ್ಲಿ ಅತಿ ಶಿಸ್ತು ಹೇರಿಕೆ ಮಾರಕ  – ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅಭಿಪ್ರಾಯ

    ದಾವಣಗೆರೆ: ಮಕ್ಕಳ ಬಗ್ಗೆ ಅತಿಯಾದ ಕಾಳಜಿ, ಅಸಡ್ಡೆ ಜತೆಗೆ ಶಿಸ್ತು ಹೇರುವುದು ಒಳ್ಳೆಯದಲ್ಲ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅಭಿಪ್ರಾಯ ಪಟ್ಟರು.
    ದಾವಣಗೆರೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಕ್ಕಳ ಪಾಲನೆ- ಪೋಷಣೆಯ ಕಲೆ’ ಕುರಿತು ಉಪನ್ಯಾಸ ನೀಡಿದರು.
    ಪ್ರತಿ ಪಾಲಕರು ಮಕ್ಕಳನ್ನು ಬೆಳೆಸುವ ಮಾದರಿ ಬೇರೆಯದೇ ಆಗಿರುತ್ತವೆ. ಎಲ್ಲಾ ಸಮಯದಲ್ಲೂ ಕಾಳಜಿ ಮಾಡದೆ, ಕೆಲವು ಕಾಲ ಅವರನ್ನು ಮುಕ್ತವಾಗಿ ಬಿಡಬೇಕು. ಆಯಾ ಸಂದರ್ಭಕ್ಕೆ ಅನುಗುಣವಾಗಿ ಮಕ್ಕಳ ಜೊತೆ ವ್ಯವಹರಿಸಬೇಕು. ಅವರನ್ನು ಜೋಪಾನವಾಗಿ ಕಾಪಾಡಬೇಕು ಎಂದು ಸಲಹೆ ನೀಡಿದರು.
    ಕೆಲವು ತಾಯಂದಿರು ಮಕ್ಕಳಿಗೆ ಊಟ ತಿನ್ನಿಸುವುದಲ್ಲದೆ ಹೋಂವರ್ಕ್ ಮಾಡಿಕೊಡುತ್ತಾರೆ. ಇದು ಮಗುವಿಗೆ ಅಪಕಾರ ಮಾಡಿದಂತೆ. ಅವರ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಬಿಡಬೇಕು ಎಂದು ಕಿವಿಮಾತು ಹೇಳಿದರು.
    ಮಕ್ಕಳು ನಾವು ಹೇಳಿದನ್ನು ಕೇಳುವುದಿಲ್ಲ. ನಮ್ಮ ವರ್ತನೆ ನೋಡಿ ಕಲಿಯುತ್ತವೆ. ಹೀಗಾಗಿ ಮಕ್ಕಳಿಗೂ ಮುನ್ನ ಪಾಲಕರೇ ಮೊದಲು ಒಳ್ಳೆಯ ಗುಣಗಳನ್ನು ಪಾಲಿಸಬೇಕು. ಹೆತ್ತವರು ಟಿವಿ- ಮೊಬೈಲ್ ಗೀಳು ಬಿಟ್ಟು ಮಕ್ಕಳೊಡನೆ ಒಡನಾಟ ವೃದ್ಧಿಸಿಕೊಳ್ಳಬೇಕು. ಪಾಲಕರು ಇಡುವ ತಪ್ಪು ಹೆಜ್ಜೆಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದರು.
    ಕೆಲವು ಪಾಲಕರಲ್ಲಿ ಮಕ್ಕಳ ಬಗ್ಗೆ ಉಡಾಫೆ ಇದೆ. ಎಲ್ಲವನ್ನೂ ಶಾಲೆಯ ಮೇಲೆ ಭಾರ ಹಾಕಿ ಬಿಡುವುದಲ್ಲದೆ ಪಾಲಕರ ಸಭೆಯಲ್ಲೂ ಭಾಗವಹಿಸುವುದಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಹಾಕಿದ ಗೆರೆ ದಾಟದಂತೆ ಬೆಳೆಸಿ ಆಟಿಕೆ ಮಾಡಿಕೊಂಡಿರುತ್ತಾರೆ. ಇದೂ ಸರಿಯಲ್ಲ ಎಂದರು.
    ಮಕ್ಕಳ ತಪ್ಪಿಗಾಗಿ ದೈಹಿಕ ದಂಡನೆ ವಿಧಿಸುವುದರಲ್ಲಿ ಅರ್ಥವಿಲ್ಲ. ತಪ್ಪು ಮಾಡುವುದು ಮನಸ್ಸೇ ಹೊರತು ದೇಹವಲ್ಲ. ಮಕ್ಕಳ ಮನಸ್ಸನ್ನು ಅರಿತು, ಅವರ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸಿದಾಗ ಅವರ ಬೆಳವಣಿಗೆ ಸೂಕ್ತ ರೀತಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.
    ಆಧುನಿಕ ಕಾಲದ ಸಂಪರ್ಕ ಮಾಧ್ಯಮಗಳು ಸಂಬಂಧ ಹಾಗೂ ಸಂಪರ್ಕ ಎರಡನ್ನೂ ಶಿಥಿಲಗೊಳಿಸುತ್ತಿವೆ. ಮಕ್ಕಳು ಹಾಗೂ ಕುಟುಂಬ ಸದಸ್ಯರ ಜತೆ ಹರಟೆ ಹೊಡೆಯಲಿಕ್ಕಾಗಿಯೇ ನಿತ್ಯ ಒಂದಿಷ್ಟು ಸಮಯ ಮೀಸಲಿಡಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗಲಿವೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್. ನಟರಾಜ್, ಜೈನ್ ಶಾಲೆಯ ಮುಖ್ಯಸ್ಥ ಅಚಲ್‌ಚಂದ್ ಜೈನ್, ಜೈನ್ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಮಧು, ಕಾರ್ಯಕ್ರಮ ಸಂಚಾಲಕಿ ಕೆ. ಯಶೋಧರಾ ಇದ್ದರು. ಜಿ.ಎಸ್. ಪ್ರೇರಣಾ ಪ್ರಾರ್ಥಿಸಿದರು. ಇ. ನಂದಾ ಸ್ವಾಗತಿಸಿದರೆ, ದೀಪಾಕುಮಾರಿ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts