

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದ ಇಸ್ಟೆಟ್ ಅಡ್ಡಗಳಿಗೆ ಬ್ರೇಕ್ ಹಾಕಿದ್ದೆ ಬಂತು, ಇದೀಗ ಅಕ್ರಮಕೋರರು ಬೆಟ್ಟ ಗುಡ್ಡಗಳಲ್ಲಿ ಇಸ್ಪೇಟ್ ಜೂಜಾಟ ನಡೆಸಲು ಆರಂಭಿಸಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಬಾದಾಮಿ ಕ್ಷೇತ್ರದ ಶಿವಪುರ ಗುಡ್ಡ. ಇಲ್ಲಿ ನಿತ್ಯ ಅವ್ಯಾಹತವಾಗಿ ಜೂಜಾಟ ಏರ್ಪಡಿಸುವ ಗ್ಯಾಂಗ್ ಇದ್ದು, ಜಿಲ್ಲೆ ಹಾಗೂ ಹೊರಜಿಲ್ಲೆಗಳ ಜೂಜುಕೋರರಿಗೆ ರತ್ನಗಂಬಳಿ ಹಾಸಿ ಜೂಜಾಟ ನಡೆಸುತ್ತಿದ್ದಾರೆ.
ಶಕ್ತಿ ದೇವತೆ ಬನಶಂಕರಿ ದೇವಸ್ಥಾನದ ಹತ್ತಿರ ಎರಡು ಕಿ.ಮೀ. ಅಂತರದಲ್ಲಿ ಇರುವ ಶಿವಪುರ ಗುಡ್ಡದಲ್ಲಿ ಜೂಜಾಟಕ್ಕೆ ವೇದಿಕೆ ನಿರ್ಮಿಸಿ ಜನರನ್ನು ಸೆಳೆಯುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಮಟ ಮಟ ಮಧ್ಯಾಹ್ನದಿಂದಲೇ ರಾತ್ರಿ ವರೆಗೂ ಈ ಇಸ್ಪೇಟ್ ದಂಧೆ ನಡೆಯುತ್ತಿದೆ. ಇಸ್ಪೇಟ್ ದಂಧೆಯ ಮೂಲ ಕಿಂಗ್ ಪಿನ್ ಒಬ್ಬರು ಪ್ರಭಾವಿ ಇದ್ದು, ಅವರ ಬೆಂಬಲದ ನೆರಳಿನಲ್ಲಿ ಜೂಜಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಶಿವಪುರ ಗುಡ್ಡದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಇಸ್ಪೇಟ್ ಜೂಜಾಟದ ವಿಡಿಯೋಗಳು ಇದೀಗ ಹರಿದಾಡುತ್ತಿವೆ. ಗಮನಾರ್ಹ ಎಂದರೆ ಹೀಗೆ ಇಸ್ಪೇಟ್ ಆಡಲು ಹೊರಜಿಲ್ಲೆಗಳಿಂದ ಬರುವ ಜೂಜುಕೋರರನ್ನು ಕರೆದುಕೊಂಡು ಹೋಗಲು ಆಟೋ ವ್ಯವಸ್ಥೆ ಸಹ ಮಾಡಿದ್ದಾರಂತೆ. ಇದರಿಂದ ನೂರಾರು ಸಂಖ್ಯೆಯ ಜೂಜುಕೋರರು ಬನಶಂಕರಿ ಬಳಿ ಇರುವ ಶಿವಪುರ ಗುಡ್ಡಕ್ಕೆ ಹರಿದುಬರುತ್ತಿದ್ದಾರೆ.
ಇಷ್ಟೊಂದು ದೊಡ್ಡಮಟ್ಟದಲ್ಲಿ ಇಸ್ಪೇಟ್ ಆಟ ನಡೆಯುತ್ತಿದ್ದರೂ ಬಾದಾಮಿ ಪೊಲೀಸರ ಗಮನಕ್ಕೆ ಇಲ್ಲ ಎನ್ನುವುದು ಅಚ್ಚರಿ ಎನ್ನಿಸುತ್ತದೆ. ಜೊತೆಗೆ ಕ್ಷೇತ್ರದಲ್ಲಿ ಮನೆಮುರಿಯುವ ಅಂದರ್ ಬಾಹರ್ ಎಸ್ಪೇಟ್ ಜೂಜಾಟ ನಡೆಯುತ್ತಿರುವುದು ಅಲ್ಲಿನ ಶಾಸಕರ ಗಮನಕ್ಕೂ ಇಲ್ಲವೇನೋ? ಒಟ್ಟಾರೆ, ಯಾರ ಅಡ್ಡಿ ಆತಂಕವೂ ಇಲ್ಲದೇ ಶಿವಪುರ ಗುಡ್ಡದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.
ಅಕ್ರಮ ದಂಧೆಗೆ ಒತ್ತಡ ?
ಬಾಗಲಕೋಟೆ ಜಿಲ್ಲೆಯಲ್ಲಿ ಈ ಮೊದಲು ಸಾಕಷ್ಟು ಪ್ರಮಾಣದಲ್ಲಿ ಇಸ್ಪೇಟ್ ಅಡ್ಡಗಳು ತಲೆ ಎತ್ತಿದ್ದವು. ಪ್ರಭಾವಿಗಳು ತಮ್ಮ ಲಾಡ್ಜ್ ಗಳಲ್ಲಿ ಇಸ್ಪೇಟ್ ಆಡಿಸುತ್ತಿದ್ದರು. ಆಗೆಲ್ಲ ಪೊಲೀಸರು ಕಣ್ಣಿದ್ದು ಕುರುಡರಾಗಿರುತ್ತಿದ್ದರು. ಆದರೆ, ಅಮರನಾಥ ರೆಡ್ಡಿ ಅವರು ಬಾಗಲಕೋಟೆ ಎಸ್ಪಿ ಆಗಿ ಬರುತ್ತಿದ್ದಂತೆ ಇಸ್ಪೇಟ್ ಅಡ್ಡಗಳು ಬಂದ್ ಆಗಿದ್ದವು. ಅಕ್ರಮವಾಗಿ ಈ ದಂಧೆ ನಡೆಸಲು ಸಾಕಷ್ಟು ಒತ್ತಡವನ್ನು ಅವರಿಗೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ವರೆಗೂ ಎಸ್ಪಿ ಅವರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಅಕ್ರಮಕೋರರು ಇದೀಗ ಗುಡ್ಡ ಬೆಟ್ಟಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲಿ ಜೂಜಾಟ ಆಡಿಸಲು ಮುಂದಾಗಿದ್ದಾರೆ. ಸದ್ಯ ಬಾದಾಮಿ ತಾಲೂಕಿನ ಶಿವಪುರ ಗುಡ್ಡದಲ್ಲಿ ಇಸ್ಪೇಟ್ ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವುದು, ಆಡಲು ಬರುವ ಜನರನ್ನು ಆಟೋಗಳಲ್ಲಿ ಕರೆದುಕೊಂಡು ಹೋಗುವ ವಿಡಿಯೋಗಳು ವೈರಲ್ ಆಗಿವೆ. ಇದಕ್ಕೆ ಬಾದಾಮಿ ಪೊಲೀಸರು ಕಡಿವಾಣ ಹಾಕುತ್ತಾರಾ? ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಜಾಣಕುರುಡುತನ ಪ್ರದರ್ಶಿಸುತ್ತಾರಾ ಕಾಯ್ದು ನೋಡಬೇಕಿದೆ.