

ವಿಜಯವಾಣಿ ಸುದ್ದಿಜಾಲ ಕಾರವಾರ
ಶಿರಸಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಫೆ.18 ರಿಂದ 20 ರವರೆಗೆ ಜಿಲ್ಲಾ ಮಟ್ಟದ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 36 ಕ್ಕೂ ಹೆಚ್ಚು ವಿವಿಧ ಜಾತಿಯ ಹೂವಿನ ಗಿಡಗಳನ್ನು ಕಚೇರಿಯ ನಾಟಿ ಮಾಡಿ ಪೋಷಿಸಲಾಗಿದ್ದು ಇಪ್ಪತೈದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಲಾಗಿದ್ದು 2ತಿಂಗಳಿAದ ಪೋಷಿಸಿ ಬೆಳೆಸಲಾಗಿದೆ. ಈ ಬಾರಿ ಜಿ.20 ಹಾಗೂ ಅಜಾದಿಕಾ ಅಮೃತ ಮಹೋತ್ಸವ ನಮ್ಮ ಶಿರಸಿ ನಮ್ಮ ಹೆಮ್ಮೆ ಶೀರ್ಷಿಕೆಯ ವರ್ಟಿಕಲ್ ಗಾರ್ಡನ್ ಮಾದರಿಗಳು , ಹೂವಿನಿಂದ ಅಣಬೆ ಕೊಡೆಗಳು, ಸೇಲ್ಪಿ ಪಾಯಿಂಟ್,ಹಸೀರು ಕಂಪನ, ಪರ್ಣ ಕುಟೀರ, ಪುನೀತ್ ರಾಜ ಕುಮಾರ್ ಅವರಿಗೆ ಸಿರಿ ನಮನ ,ತರಕಾರಿಗಳಿಂದ ರಂಗೋಲಿ, ಹೈಡ್ರೋಪೋನಿಕ್ , ಪುಷ್ಪ ಜಲಪಾತ,ತಾವರೆಕೊಳ, ಒಳಾಂಗಣ ಸಸ್ಯಗಳ ವಿನ್ಯಾಸ,ರೈತರು ಬೆಳೆದ ಫಲ ಪುಷ್ಪಗಳ ಪ್ರದರ್ಶನ ಹೂವಿನ ಜೋಡಣೆ, ಉದ್ಯಾನ ಮಾದರಿಗಳು ,ತರಕಾರಿ ಪ್ರಾತ್ಯಕ್ಷಿಕೆ,ಅಡಕೆಗೆ ಪರ್ಯಾಯ ಬೆಳೆಗಳ ಪರಿಚಯ,ಜಿಲ್ಲೆಯ ವಿಶೇಷ ಬೆಳೆಗಳ ಪರಿಚಯ, ಇಲಾಖೆ ಯೋಜನೆ ಗಳ ಮಾಹಿತಿ , ವಿವಿಧ ಜಾತಿಯ ಹೂವಿನ ಗಿಡಗಳನ್ನು ಪರಿಚಯಿಸಲಾಗುವುದು ಎಂದರು.
ಹಣ್ಣು,ತರಕಾರಿ,ಹೂವಿನ ಬೆಳೆಗಳು,ಸಂಬಾರು ಬೆಳೆಗಳು,ಸಂಸ್ಕರಣಾ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗಿದೆ. 70ವಿವಿಧ ಮಳಿಗೆಗಳನ್ನು ತೆರೆಯಲಾಗುವುದು.ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗವಾಗುವ ಯಂತ್ರೋಪಕರಣಗಳ ಪ್ರದರ್ಶನ,ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಬಳಕೆ ,ಸಸ್ಯಾಗಾರಗಳಮಳಿಗೆ , ಸಂಸ್ಕರಿಸಿದ ಪದಾರ್ಥಗಳ ಮಳಿಗೆ , ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಕೈ ತೋಟ ಮತ್ತು ವರ್ಟಿಕಲ್ ತೋಟದ ಮಾದರಿ ನಿರ್ಮಿಸಲಾಗುವುದು. ಜಿಲ್ಲೆಯ ವಿವಿಧ ತಾಲೂಕಿನಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪ್ರದರ್ಶನವಿರಲಿದೆ ಎಂದು ಮಾಹಿತಿ ನೀಡಿದರು.
ಉದ್ಘಾಟನೆ:
ಫೆ.18ರಂದು ಸಾಯಂಕಾಲ 4ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಸೇರಿ ಅತಿಥಿಯಾಗಿರುವರು ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ,ಶಿರಸಿ ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ತೋಟಗಾರಿಕೆ ಇಲಾಖೆ ಅಧಿಕಾರಿ ಗಣೇಶ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.