

ವಿಜಯವಾಣಿ ಸುದ್ದಿಜಾಲ ಕಾರವಾರ
ಒಂದೆಡೆ ಬಿಳಿ ಸೇವಂತಿಗೆಯಲ್ಲಿ ಅಣಬೆ, ಇನ್ನೊಂದೆಡೆ ಐ ಲವ್ ಶಿರಸಿ' ಎಂಬ ಸೆಲಿ ಪಾಯಿಂಟ್, ,ಮತ್ತೊಂದೆಡೆಆಜಾದಿಕಾ ಅಮೃತ ಮಹೋತ್ಸವ' ಲೋಗೋ ಹೀಗೆ ಹೂವಿನ ಲೋಕವೇ ಶಿರಸಿ ನಗರದಲ್ಲಿ ತೆರೆದುಕೊಂಡಿದೆ.
ತೋಟಗಾರಿಕೆ ಇಲಾಖೆಯಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಶನಿವಾರದಿಂದ ಮೂರು ದಿನಗಳ ಫಲ, ಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಹೂವಿನ ಮಾದರಿಗಳು ಜನರನ್ನು ಕೈಬೀಸಿ ಸೆಳೆಯುತ್ತಿವೆ. ಕದಂಬ ರಥವಿದೆ, ಯಾಣದ ಶಿಖರವಿದೆ. ಹೂವಿನ ಗಿಡಗಳ ಮಾರಾಟವಿದೆ. ಮತದಾನದ ಕುರಿತು ಜಾಗೃತಿ ಮೂಡಿಸುವ ಮಳಿಗೆ ಇದೆ ಒಟ್ಟಿನಲ್ಲಿ ವಿಭಿನ್ನ ವಿಷಯಗಳನ್ನು ಬರೀ ಪುಷ್ಪದಲ್ಲೇ ಅರಳಿಸಲಾಗಿದೆ.
ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ:
ಪುಷ್ಪ ಪ್ರದರ್ಶನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿ ಮಾತನಾಡಿ, `ಉತ್ತರ ಕನ್ನಡ ತೋಟಗಾರಿಕೆ ಜಿಲ್ಲೆ. ಇಲ್ಲಿನ ರೈತರು ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಬೆಳೆಗಳ ಮೌಲ್ಯವರ್ಧನೆ ಮಾಡುತ್ತಿದ್ದು, ಅದಕ್ಕೆ ಮಾರುಕಟ್ಟೆಯೂ ಸಿಗುತ್ತಿದೆ. ಇಲಾಖೆಗಳು ರೈತರ ಕ್ರಿಯಾಶೀಲ ಮನೋಭಾವವನ್ನು ಗುರುತಿಸಿ ನೆರವಾಗಬೇಕು. ಕೃಷಿ ಯಾಂತ್ರೀಕರಣಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಉಪ ನಿರ್ದೇಶಕ ಸತೀಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗೌಡ, ಸಹಕಾರಿ ಜಿ.ಆರ್.ಹೆಗಡೆ, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್.ಭಟ್ಟ, ಕೃಷಿ ಇಲಾಕೆ ಉಪ ನಿರ್ದೇಶಕ ಟಿ.ಎಚ್.ನಟರಾಜ್, ತಾಪಂ ಇಒ ದೇವರಾಜ ಹಿತ್ಲಕೊಪ್ಪ, ತೋಟಗಾರಿಕೆ ಕಾಲೇಜ್ ಡೀನ್ ಡಾ.ಎಂ.ಎಚ್.ತಟಗಾರ ಇದ್ದರು.