ಶಿರಸಿಗೆ ನೀರಿನ ಅಭಾವದ ಬರೆ

28sirsi2
Published on

ರಾಜೇಂದ್ರ ಶಿಂಗನಮನೆ ಶಿರಸಿ

ಬೇಸಿಗೆ ಆರಂಭಕ್ಕೂ ಮೊದಲೇ ತಾಲೂಕಿನ ವಿವಿಧ ಜಲಮೂಲಗಳಿಗೆ ಅನಧಿಕೃತ ಪಂಪ್​ಸೆಟ್​ಗಳ ಹಾವಳಿ ಮಿತಿಮೀರಿದೆ. ಇದರಿಂದ ಕುಡಿಯುವ ಹಾಗೂ ಕೃಷಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ.

ತಾಲೂಕಿನ ವರದಾ, ಅಘನಾಶಿನಿ, ಶಾಲ್ಮಲಾ ಸೇರಿ ಚಿಕ್ಕಪುಟ್ಟ ತೊರೆಗಳು ತಮ್ಮ ಹರಿವನ್ನು ಇಳಿಸಿಕೊಂಡಿವೆ. ಹೀಗಾಗಿ ಕೃಷಿ ಭೂಮಿಗೆ ನೀರಿನ ಸಮಸ್ಯೆ ಅಲ್ಲಲ್ಲಿ ತಲೆದೋರುತ್ತಿದ್ದು, ನದಿ ತಟಗಳಲ್ಲಿ ಅನಧಿಕೃತ ಪಂಪ್​ಸೆಟ್​ಗಳ ಜೋಡಣೆ ಅವ್ಯಾಹತವಾಗಿ ನಡೆದಿದೆ.

ತಾಲೂಕಿನ ವಿವಿಧ ಜಲಮೂಲಗಳಲ್ಲಿ ಈ ಹಿಂದಿನಿಂದ ಕೃಷಿ ಪೂರಕ ನೂರಾರು ಪಂಪ್​ಸೆಟ್​ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅಂಥ ಅಧಿಕೃತ ಪಂಪ್​ಸೆಟ್​ಗಳನ್ನೂ ಮೀರಿಸುವಂತೆ ಅಂದಾಜು 100ಕ್ಕೂ ಹೆಚ್ಚು ಕಡೆ ಅಕ್ರಮ ಪಂಪ್​ಸೆಟ್ ಅಳವಡಿಸಿ ವಾಣಿಜ್ಯ ಉದ್ದೇಶಕ್ಕೆ ನೀರು ಬಳಸಲಾಗುತ್ತಿದೆ. 5ರಿಂದ 15 ಅಶ್ವಶಕ್ತಿಗಳ ಪಂಪ್​ಗಳು ನೀರೆತ್ತುವ ಕಾರ್ಯದಲ್ಲಿ ನಿರತವಾಗಿವೆ. ಈ ಹಿಂದಿನ ಕಡಿಮೆ ಅಶ್ವಶಕ್ತಿಯ ಪಂಪ್​ಗಳಿರುವೆಡೆ ಅನಧಿಕೃತಾಗಿ ಹೆಚ್ಚಿನ ಅಶ್ವಶಕ್ತಿಯ ಪಂಪ್ ಜೋಡಿಸಿ ಯಥೇಚ್ಛ ನೀರು ಬಳಸಲಾಗುತ್ತಿದೆ. ಕೆಲವು ಪಂಪ್​ಸೆಟ್ ಬಳಕೆದಾರರು ವಿವಿಧ ಕಾಂಕ್ರೀಟ್ ಕಾಮಗಾರಿಗಳಿಗೆ ನೀರು ನೀಡುವ ಉದ್ದೇಶದಿಂದ ಟ್ಯಾಂಕರ್​ಗಳಿಗೂ ನೀರು ಪೂರೈಸುತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರಿಂದ ಗ್ರಾಮೀಣ ಭಾಗದ ಮೂಲ ಬಳಕೆದಾರರಿಗೆ ಸಮಸ್ಯೆ ಎದುರಾಗಿದೆ ಎಂಬುದು ಶಾಲ್ಮಲಾ ನದಿ ತಟದ ಹಲವು ಗ್ರಾಮಸ್ಥರ ಅಭಿಪ್ರಾಯ.

ನಗರಕ್ಕೂ ತಟ್ಟಲಿದೆ ಬಿಸಿ: ಬೇಸಿಗೆಯುದ್ದಕ್ಕೂ ನೀರಿನ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆಯಾಗಿ ನಗರದ ಕುಡಿಯುವ ನೀರಿನ ಮೂಲವಾದ ಮಾರಿಗದ್ದೆ ಹಾಗೂ ಕೆಂಗ್ರೆ ಜಾಕ್​ವೆಲ್ ಬಳಿ ಬಂಡು ನಿರ್ಮಾಣ ಕಾರ್ಯ ನಡೆದಿದೆ. ಆದರೆ, ಇವುಗಳ ಸುತ್ತಮುತ್ತ ಹೊಸದಾಗಿ ಪಂಪ್​ಸೆಟ್ ಅಳವಡಿಕೆ ಕಾರ್ಯ ನಡೆದಿದೆ. ಕಳೆದ ವರ್ಷಗಳಲ್ಲಿ ಇಂಥ ಅಕ್ರಮ ಪಂಪ್​ಸೆಟ್​ಗಳನ್ನು ಜಾಲಾಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ತಮ್ಮ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸುತ್ತಿದ್ದಾರೆ. ಇದು ಸ್ಥಗಿತಗೊಳ್ಳದಿದ್ದರೆ ನಡು ಬೇಸಿಗೆಯಲ್ಲಿ ನಗರಕ್ಕೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವರದೆಯ ಮರಳು: ಪೂರ್ವ ಭಾಗದ ಹಳ್ಳಿಗರ ಜೀವನದಿಯಾದ ವರದಾ ಅವಧಿಗೂ ಮುನ್ನವೇ ಬತ್ತತೊಡಗಿದೆ. ಜತೆಗೆ ನೂರಾರು ಪಂಪ್​ಸೆಟ್​ಗಳು ನದಿಯ ಎರಡೂ ತಟಗಳಲ್ಲಿ ಕಾಣುತ್ತಿದ್ದು, ಇನ್ನಷ್ಟು ನೀರು ಕಡಿಮೆಯಾಗಲು ಕಾರಣವಾಗಿವೆ. ಅನಾನಸ್, ಅಡಕೆ, ಬಾಳೆ ಸೇರಿ ಬೇಸಿಗೆ ಬೆಳೆ ಬೆಳೆಯಲು ವಿದ್ಯುತ್ ಇರುವಷ್ಟು ಸಮಯದ ನಿರಂತರ ನೀರೆತ್ತುವ ಕ್ರಮದಿಂದ ಅವಧಿಗೂ ಮುನ್ನ ನೀರು ಬತ್ತಿದೆ. ಇದರಿಂದ ಬನವಾಸಿ ನವಗ್ರಾಮ ಸೇರಿ ಹಲವು ಭಾಗದಲ್ಲಿ ಕುಡಿಯಲು ಶುದ್ಧ ನೀರಿನ ಸಮಸ್ಯೆ ಕಾಡತೊಡಗಿದೆ. ನದಿಗೆ ಎದುರಾದ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಮರಳು ಮಾಫಿಯಾದವರೂ ಕೂಡ ನದಿಯೊಡಲು ಬಗೆದು ಮರಳನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದು ಬನವಾಸಿಗರ ದೂರಾಗಿದೆ.

ವಿದ್ಯುತ್ ಕಳ್ಳತನ; ಅಕ್ರಮ ಪಂಪ್​ಸೆಟ್ ಬಳಕೆದಾರರಿಗೆ ಹೆಸ್ಕಾಂ ಅನುಮತಿ ನೀಡದಿದ್ದರೂ ವ್ಯತ್ಯಾಸ ಆಗುತ್ತಿಲ್ಲ. ನೇರವಾಗಿ ವಿದ್ಯುತ್ ತಂತಿಗೆ ವೈಯರ್ ಜೋಡಿಸಿ ವಿದ್ಯುತ್ ಕಳ್ಳತನ ಮಾಡಿ ಪಂಪ್ ನಡೆಸುತ್ತಿದ್ದಾರೆ. ಈ ಕುರಿತಾಗಿ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಗಮನಕ್ಕಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಬೇಸಿಗೆ ಸಂದರ್ಭದಲ್ಲಿ ಯಾವ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಪಂಪ್​ಸೆಟ್​ಗಳ ಹಾವಳಿ ಹೆಚ್ಚುತ್ತದೆ. ಇದರಿಂದ ಆಯಾ ಜಲಮೂಲದ ಕಾಯಂ ಬಳಕೆದಾರರಿಗೆ ಸಮಸ್ಯೆ ಆಗುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮ ಪಂಪ್​ಸೆಟ್ ಮಾಲೀಕರು, ಬಳಕೆದಾರರ ವಿರುದ್ಧ ಶಿಸ್ತು ಕ್ರಮವಹಿಸಿದರೆ ಇಂಥ ಸಮಸ್ಯೆ ನಿವಾರಣೆಯಾಗುತ್ತದೆ. | ಮಾದೇವ ನಾಯ್ಕ ಬಿಸಲಕೊಪ್ಪ ಸಾಮಾಜಿಕ ಕಾರ್ಯಕರ್ತ

ಅನಧಿಕೃತವಾಗಿ ಜಲಮೂಲಗಳಿಗೆ ಪಂಪ್​ಸೆಟ್ ಅಳವಡಿಸಿದ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪಡೆದು ಅಂಥ ಬಳಕೆದಾರರಿಗೆ ತಕ್ಷಣ ಪಂಪ್​ಸೆಟ್ ತೆಗೆಯಬೇಕೆಂದು ಇಲಾಖೆಯಿಂದ ಸೂಚಿಸಲಾಗುವುದು. ಒಂದೊಮ್ಮೆ ತೆಗೆಯದಿದ್ದರೆ ತಹಸೀಲ್ದಾರ್ ವಿಶೇಷಾಧಿಕಾರ ಬಳಸಿಕೊಂಡು ಪೊಲೀಸ್ ಸಹಕಾರದಲ್ಲಿ ಅನಧಿಕೃತ ಪಂಪ್​ಸೆಟ್​ಗಳ ಸಂಪರ್ಕ ಕಡಿತಗೊಳಿಸಲಾಗುವುದು. | ಎಂ.ಆರ್. ಕುಲಕರ್ಣಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net