ಶಿರಸಿ ಮಾರಿಕಾಂಬಾ ಜಾತ್ರೆ, ಹೊಸ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ

27SIRSI5
Published on

ಶಿರಸಿ: ಮಾರಿಕಾಂಬಾ ಜಾತ್ರೆಗೆ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆ ಹೊಸ ಮಾರ್ಗಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಗುರುವಾರ ಪ್ರಾಯೋಗಿಕವಾಗಿ ಹೊಸ ಮಾರ್ಗಗಳಲ್ಲಿ ವಾಹನಗಳ ಸಂಚಾರ ನಡೆಸಲಾಯಿತು.

ಡಿವೈಎಸ್ಪಿ ಜಿ.ಟಿ. ನಾಯಕ ಮಾರ್ಗದರ್ಶನದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಾವಣೆಯಾದ ಮಾರ್ಗಗಳಲ್ಲಿ ವಾಹನಗಳು ಸಂಚರಿಸಿದವು. ನಿತ್ಯ ಸಂಚರಿಸುವವರು ಆರಂಭದಲ್ಲಿ ಗೊಂದಲಕ್ಕೊಳಗಾದರೂ ನಿಧಾನವಾಗಿ ಬದಲಾವಣೆ ಮಾರ್ಗಕ್ಕೆ ಹೊಂದಿಕೊಂಡರು. ಆದರೆ, ಆರಂಭದಲ್ಲಿ ಪೊಲೀಸರು ಸರಿಯಾಗಿ ಮಾರ್ಗಗಳನ್ನು ತೋರದ ಕಾರಣ ಪರ ಊರಿನ ವಾಹನಗಳು, ಬಸ್​ಗಳು ನಗರದೊಳಗಿನ ಪುಟ್ಟ ಪುಟ್ಟ ಗಲ್ಲಿಯ ರಸ್ತೆಯಲ್ಲಿ ಸಾಗಿದವು. ದೇವಿಕೆರೆ, ಟಿವಿ ಸ್ಟೇಶನ್ ರಸ್ತೆಯಲ್ಲಿಯೂ ಬಸ್ ಸಂಚರಿಸಿತು. ಇದರಿಂದ ವಿವಿಧೆಡೆ ವಾಹನ ದಟ್ಟಣೆ ಉಂಟಾಯಿತಾದರೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ಸುಲಭಗೊಳಿಸಿದರು. ಐದು ಸರ್ಕಲ್ ರಸ್ತೆ, ಜೂ ಸರ್ಕಲ್, ರಾಘವೇಂದ್ರ ಸರ್ಕಲ್, ಬಾರಕೂರ ಚೌಕ, ಶ್ರದ್ಧಾನಂದ ಗಲ್ಲಿ, ಬಸ್ ನಿಲ್ದಾಣ ಸರ್ಕಲ್ ಸೇರಿದಂತೆ ವಿವಿಧೆಡೆ ಪೊಲೀಸರು ನಿಂತು ಸಂಚಾರ ಸುಗಮಗೊಳಿಸಲು ಶ್ರಮಿಸಿದರು.

ಇಕ್ಕಟ್ಟಿಗೆ ಕಾರಣ?: ಏಕಮುಖ ಸಂಚಾರ ರಸ್ತೆಯಾಗಿ ಮಾರ್ಪಟ್ಟ ಸಿಪಿ ಬಜಾರ, ಶ್ರದ್ಧಾನಂದ ಗಲ್ಲಿಯ ಇಕ್ಕಟ್ಟಾದ ರಸ್ತೆಗಳಲ್ಲಿ ಬೃಹತ್ ವಾಹನಗಳು ಸಂಚರಿಸಲು ಕೆಲಕಾಲ ಸಮಸ್ಯೆಯಾಯಿತು. ಕ್ರಮೇಣ ಪೊಲೀಸರ ಮಾರ್ಗದರ್ಶನದಲ್ಲಿ ಸಂಚಾರ ಸುಗಮಗೊಂಡಿತು. ಆದರೆ ವಾಹನ ದಟ್ಟಣೆ ಇರದ ಈ ಸಂದರ್ಭದಲ್ಲಿಯೇ ಚಿಕ್ಕಪುಟ್ಟ ಸಮಸ್ಯೆಯಾದರೆ ಜಾತ್ರೆಯ ವೇಳೆ ಸಮಸ್ಯೆ ದೊಡ್ಡದಾಗುವ ಸಾಧ್ಯತೆಯಿದೆ. ಹಾಗಾಗಿ ಈ ಮಾರ್ಗ ಕೈಬಿಡುವುದು ಒಳಿತು ಎಂಬ ಮಾತುಗಳು ಕೆಲ ಸಾರ್ವಜನಿಕರಿಂದ ವ್ಯಕ್ತವಾದವು.

ಶೇಕಡಾ 50ರಷ್ಟು ಸಿಬ್ಬಂದಿ ಇಳಿಕೆ ಹೊಸ ಮಾರ್ಗಗಳಲ್ಲಿ ವಾಹನ ಸಂಚಾರ ಹಾಗೂ ಈಗಿರುವ ಪೊಲೀಸ್ ಸಿಬ್ಬಂದಿಯ ಸಮರ್ಥ ಕಾರ್ಯವೈಖರಿಯಿಂದ ಟ್ರಾಫಿಕ್ ಸಮಸ್ಯೆಗಾಗಿ ನಿಯೋಜಿಸುವ ಶೇ.50ರಷ್ಟು ಸಿಬ್ಬಂದಿ ಇಳಿಕೆಗೆ ಅನುಕೂಲ ಆಗಲಿದೆ. ಪ್ರಸ್ತುತ ಪ್ರಾಯೋಗಿಕವಾಗಿ ತೆಗೆದುಕೊಂಡ ಮಾರ್ಗಗಳಲ್ಲಿ ಮಾ.2 ಅಥವಾ 3ರಿಂದ ವಾಹನ ಸಂಚಾರ ಆರಂಭಿಸಲಾಗುವುದು. ಉತ್ತಮ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಸಾರ್ವಜನಿಕರ ಸಹಕಾರ ಅಗತ್ಯ. | ಜಿ.ಟಿ.ನಾಯಕ ಡಿವೈಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net