ಶಿರಸಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿ ಪತ್ರ ಚಳವಳಿ

28sirsi2
Published on

ಶಿರಸಿ: ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡು ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೊಷಿಸುವಂತೆ ಆಗ್ರಹಿಸಿ ಇಲ್ಲಿನ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಪತ್ರ ಚಳವಳಿ ಆರಂಭಿಸಿದ್ದಾರೆ.

ಶುಕ್ರವಾರ ನಗರದ ಬಿಡ್ಕಿಬೈಲ್​ನಲ್ಲಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಳವಳಿಗೆ ಚಾಲನೆ ನೀಡಲಾಯಿತು. ಸಾಮಾಜಿಕ ಧುರೀಣ ಕಾಶಿನಾಥ ಮೂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಮಾಡಿ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ನೀಡಲಾಗಿದೆ. ಜತೆಗೆ ಪ್ರತಿಭಟನೆ ಕೂಡ ಮಾಡಲಾಗಿದೆ. ಆದರೆ, ಪ್ರತ್ಯೇಕತೆ ಕೂಗು ಸರ್ಕಾರದ ಕಿವಿಗೆ ತಲುಪಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆ ಆಗುವವರೆಗೂ ಹೋರಾಟ ಸಂಘಟಿಸಲಾಗುವುದು. ಪತ್ರ ಚಳವಳಿ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆಯ ಕೂಗು ಹಲವು ವರ್ಷಗಳ ಬೇಡಿಕೆಯಾಗಿದೆ. ಜಿಲ್ಲೆ ವಿಸ್ತಾರವಾಗಿರುವ ಕಾರಣ ವ್ಯಾವಹಾರಿಕ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಕೇಂದ್ರ ಸ್ಥಾನ ಕಾರವಾರಕ್ಕೆ ಸಂಚಾರದ ಸಮಸ್ಯೆ ಕಾಡುತ್ತಿದೆ. ಸರ್ಕಾರದ ಅನುದಾನದಲ್ಲಿಯೂ ಘಟ್ಟದ ಮೇಲಿನ ತಾಲೂಕುಗಳಿಗೆ ತಾರತಮ್ಯ ಮಾಡಲಾಗುತ್ತಿದೆ. ಇವೆಲ್ಲ ನಿವಾರಣೆಯಾಗಿ ಘಟ್ಟದ ತಾಲೂಕುಗಳು ಅಭಿವೃದ್ಧಿ ಆಗಲು ಪ್ರತ್ಯೇಕ ಜಿಲ್ಲೆ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಕಂದಾಯ ಸಚಿವರಿಗೆ ಪತ್ರದ ಮೂಲಕ ಒತ್ತಡ ಹಾಕಲಾಗುವುದು ಎಂದರು.

ಪ್ರಮುಖರಾದ ಎಂ.ಎಂ. ಭಟ್ಟ, ಅಶೋಕ ಭಟ್ಟ, ಗಣಪತಿ ನಾಯ್ಕ, ಅರವಿಂದ ನೇತ್ರೇಕರ, ಮಹೇಶ ನಾಯ್ಕ, ಶ್ರೀಧರ ಮೊಗೇರ, ಮಂಜು ಮೊಗೇರ, ವಿನಾಯಕ ಹೊಸಪಟ್ಟಣ, ಸಿ.ಎಫ್. ಈರೇಶ, ರಘು ಕಾನಡೆ, ನಂದಕುಮಾರ ಜೋಗಳೇಕರ, ಚಂದ್ರು ದೇವಾಡಿಗ, ರಮೇಶ ಆಚಾರಿ, ಜೂಜೆ ನರೋನ್ಹಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net