

ಪಾತಪಾಳ್ಯ: ರಾಚವಾರಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕಾಂಪೌಂಡ್ ಶಿಥಿಲಗೊಂಡಿದ್ದು, ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸೋಮನಾಥಪುರ ಗ್ರಾಪಂ ವ್ಯಾಪ್ತಿಯ ರಾಚವಾರಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ಕೊಠಡಿ, ಅಪೂರ್ಣವಾದ ಕಟ್ಟಡ, ಅಂಗನವಾಡಿ ಕೇಂದ್ರ ಇದೆ. ಶಾಲೆಯಲ್ಲಿ 32 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ 15ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಶಾಲಾ ಆವರಣದಲ್ಲಿ 30 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಅಪೂರ್ಣಗೊಂಡ ಕಟ್ಟಡ ಇದ್ದು, ಪ್ರಯೋಜನಕ್ಕೆ ಬಾರದಂತಿದೆ.
ದುರಸ್ತಿ ಶೀಘ್ರಗತಿಯಲ್ಲಾಗಲಿ: ರಸ್ತೆ ಪಕ್ಕದಲ್ಲಿಯೇ ಇರುವ ಶಾಲೆಯ ಕಾಂಪೌಂಡ್ ಶಿಥಿಲಗೊಂಡಿರುವುದಲ್ಲದೆ, ಗೇಟ್ ಸಹ ಇರುವುದಿಲ್ಲ. ಮಳೆ ಬಂದರೆ ನೀರೆಲ್ಲ ಶಾಲಾ ಆವರಣದಲ್ಲಿ ಸಂಗ್ರಹವಾಗುತ್ತದೆ. ಮಕ್ಕಳು ವಿಧಿ ಇಲ್ಲದೆ ಇದರೊಳಗೆ ಓಡಾಡಬೇಕು. ಶಾಲೆಯ ರಜಾದಿನಗಳಲ್ಲಿ ಜಾನುವಾರುಗಳ ತಾಣವಾಗಿ ಮಾರ್ಪಡುತ್ತದೆ. ಇಲ್ಲಿ ಗೇಟ್ ಇಲ್ಲದೆ ಇರುವುದರಿಂದ ಶಾಲೆ ಬಿಟ್ಟ ತಕ್ಷಣ ಮಕ್ಕಳು ರಸ್ತೆಗೆ ಓಡುತ್ತಾರೆ. ವಾಹನಗಳು ಅಡ್ಡಾದಿಡ್ಡಿಯಾಗಿ ಇಲ್ಲಿ ಸಂಚರಿಸುತ್ತವೆ. ಇದರಿಂದ ಅಪಘಾತದ ಸಂಭಾವ್ಯತೆ ಹೆಚ್ಚಿದೆ. ಹೀಗಾಗಿ ಶಿಥಿಲಾವಸ್ಥೆ ತಲುಪಿರುವ ಕಾಂಪೌಂಡ್ ದುರಸ್ತಿಗೊಳಿಸಿ ಗೇಟ್ ಅಳವಡಿಸಬೇಕು. ಸಂಭವಿಸಬಹುದಾದ ಅವಘಡಗಳಿಗೆ ಬ್ರೇಕ್ ಹಾಕುವ ಕೆಲಸ ತಕ್ಷಣವೇ ನಡೆಯಬೇಕಿದೆ. ಇನ್ನೇನು ಶಾಲೆ ಆರಂಭವಾಗುತ್ತಿರುವುದರಿಂದ ಶಾಲಾ ಕೊಠಡಿ ಮತ್ತು ಆವರಣಗಳ ಭದ್ರತೆ ಅವಶ್ಯವಿದೆ. ಹೀಗಾಗಿ ತಕ್ಷಣವೇ ಕಾಂಪೌಂಡ್ ನವೀಕರಣಗೊಳಿಸಬೇಕು. ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗದಂತೆ ಚರಂಡಿ ನಿರ್ಮಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಸಿ.ಕೃಷ್ಣಾರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ರಾಮಾಂಜಿ, ಮುಖಂಡರಾದ ಖದ್ರಿಪತಿ ನಾಯಕ, ಬಿ.ವಿ. ಶ್ರೀನಿವಾಸ, ರಾಮಯ್ಯ, ವೆಂಕಟರವಣ ಆಗ್ರಹಿಸಿದ್ದಾರೆ.
ರಾಚವಾರಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ಶಿಥಿಲಗೊಂಡಿದೆ. ಈ ಬಗ್ಗೆ ಗ್ರಾಪಂ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
- ಜಿ.ವಿ.ಶೋಭನ್‌ರೆಡ್ಡಿ, ಪಿಡಿಒ, ಸೋಮನಾಥಪುರ ಗ್ರಾಪಂ.
ಬಾಗೇಪಲ್ಲಿ ತಾಲೂಕಿನ ನಲ್ಲಚೆರವು(ನಗರ‌್ಲು) ಸರ್ಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಿದ್ದ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯನ್ನು ನೆಲಸಮಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲಚೆರವು(ನಗರ‌್ಲು) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಆವರಣದಲ್ಲಿ ಮೂರು ಕೊಠಡಿಗಳಿದ್ದು, ಎರಡು ಕೊಠಡಿಗಳು ಸುಭದ್ರವಾಗಿದ್ದು, ಒಂದು ಕೆಲಸಕ್ಕೆ ಬಾರದಂತಾಗಿದೆ. ಕೊಠಡಿಯು ಮಳೆ ಬಂದರೆ ಸೋರುತ್ತದೆ. ಕಿಟಿಕಿ, ಬಾಗಿಲು, ಗೋಡೆಗಳು ಬಿರುಕು ಬಿಟ್ಟಿವೆ, ಕುಸಿಯುವ ಸ್ಥಿತಿಯಲ್ಲಿದೆ. ಇದರ ಪಕ್ಕದ ಕೊಠಡಿಯಲ್ಲೇ ತರಗತಿಗಳು ನಡೆಯುತ್ತಿವೆ. ರಜೆ ದಿನಗಳಲ್ಲಿ, ಶಾಲೆಗೆ ಮುಂಚಿತವಾಗಿ ಬಂದಾಗ ಮಕ್ಕಳು ಕೊಠಡಿ ಸಮೀಪ ಆಟವಾಡಲು ತೆರಳುವರು. ಅಂಥ ಸಮಯದಲ್ಲೇನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು ಎಂಬಂತಾಗಿದೆ.
ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಗೊಂಡಿದ್ದಾರೆ. ಇನ್ನೊಂದು ವಾರದಲ್ಲಿ ಶಾಲೆ ಆರಂಭವಾಗುತ್ತದೆ. ಅಷ್ಟರೊಳಗೆ ಕುಸಿಯುವ ಹಂತದಲ್ಲಿರುವ ಶಾಲಾ ಕೊಠಡಿಯನ್ನು ನೆಲಸಮಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಇಲ್ಲದಿದ್ದರೆ ಶಾಲೆಯಲ್ಲಿ ಗಣತಿ ಕಡಿಮೆ ಆಗುವ ಸಂಭವ ಹೆಚ್ಚಿದೆ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟರಮಣ, ಮುಖಂಡರಾದ ರಮಣ, ಬಾಲಕೃಷ್ಣ, ಮುಸ್ತಫ, ಅಮೀರ್‌ಜಾನ್ ಒತ್ತಾಯಿದ್ದಾರೆ.
ನಲ್ಲಚೆರವು ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಯನ್ನು ಕೆಡವಲು ಎಸ್‌ಡಿಎಂಸಿ ಸಭೆಯಲ್ಲಿ ತೀರ್ಮಾನಿಸಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತರಲಾಗಿದೆ.
- ಕೆ.ಟಿ.ದತ್ತಾತ್ರೇಯ, ಪ್ರಭಾರ ಮುಖ್ಯ ಶಿಕ್ಷಕ, ಸರ್ಕಾರಿ ಪ್ರಾಥಮಿಕ ಶಾಲೆ, ನಲ್ಲಚೆರವು.
ನಲ್ಲಚೆರವು ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಇಲಾಖೆಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು
- ನಾರಾಯಣಸ್ವಾಮಿ, ಪಿಡಿಒ, ತೋಳ್ಳಪಲ್ಲಿ