ಶಿಥಿಲ ಸ್ಥಿತಿಯ ಮನೆಗಳನ್ನು ಗುರುತಿಸಿ

28ss1Rajak maahiti
Published on

ಶನಿವಾರಸಂತೆ: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಿಪದ ನಿಡ್ತ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಳೆ ವಿಪತ್ತು ಮುಂಜಾಗ್ರತಾ ಟಾಸ್ಕ್‌ಫೋರ್ಸ್ ಸಭೆಯನ್ನು ಅಧ್ಯಕ್ಷ ಟಿ.ಕೆ.ಅಶೋಕ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಮಳೆಯಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಉದ್ದೇಶದಿಂದ ಏರ್ಪಡಿಸಿದ್ದ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ನಿಡ್ತ ವೃತ್ತ ಗ್ರಾಮ ಆಡಳಿತಾಧಿಕಾರಿ ರಜಾಕ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ಶಿಥಿಲ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ಎಚ್ಚರವಹಿಸುವುದು ಅಗತ್ಯ. ಮನೆ ಶಿಥಿಲಗೊಂಡಿದ್ದಲ್ಲಿ ಮನೆ ಮಂದಿಯನ್ನು ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವುದು, ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸುವುದು, ಮಳೆಯಿಂದ ಸಮಸ್ಯೆಯಾದಾಗ ಗ್ರಾಮಸ್ಥರು ಸಂಬಂಧ ಪಟ್ಟ ಗ್ರಾಪಂ, ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಟಾಸ್ಕ್‌ಪೋರ್ಸ್ ಸಿದ್ಧವಿರುವುದೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು.

ಗ್ರಾಪಂ ಅಧ್ಯಕ್ಷ ಟಿ.ಕೆ.ಅಶೋಕ್ ಮಾತನಾಡಿದರು. ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ವೇದಪ್ರಿಯಾ ಮಾಹಿತಿ ನೀಡಿದರು.

ಪಿಡಿಒ ಮಾನಸ, ಗ್ರಾಪಂ ಸದಸ್ಯರಾದ ಎಸ್.ಎಸ್.ಕಾರ್ತಿಕ್, ತಸ್ಲಿಂ, ಹರೀಶ್‌ಕುಮಾರ್, ಪ್ರಮುಖರಾದ ಸುಬ್ಬಪ್ಪ, ಪುಟ್ಟಣ್ಣ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net