

ಬೇಲೂರು: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ, ನೆಟ್ಟೇಕೆರೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ, ಭಯದಲ್ಲಿದ್ದಾರೆ ಮಕ್ಕಳು ಎಂಬ ತಲೆ ಬರಹದಡಿ ಭಾನುವಾರ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿ ಮಂಗಳವಾರ ಬೆಳಗ್ಗೆಯಿಂದಲೇ ಗುತ್ತಿಗೆದಾರರಿಂದ ಕಾಮಗಾರಿ ಪ್ರಾರಂಭಿಸಿದ್ದಾರೆ.
ಇಬ್ಬೀಡು ಗ್ರಾಮ ಪಂಚಾಯಿತಿಗೆ ಸೇರುವ ನೆಟ್ಟೇಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲೆಯ ಕಟ್ಟಡ ಕಾಮಗಾರಿ ಪ್ರಾರಂಭವಾಗಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ವಿಜಯವಾಣಿ ಪತ್ರಿಕೆಯಲ್ಲಿನ ವರದಿ ಪರಿಣಾಮ ಮಕ್ಕಳನ್ನು ಸಮೀಪದ ಸಮುದಾಯ ಭವನಕ್ಕೆ ಕರೆದೊಯ್ದು ಪಾಠ ಮಾಡಿಸಲಾಗುತ್ತಿದೆ. ನೆಟ್ಟೇಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದ ಹಿನ್ನೆಲೆಯಲ್ಲಿ ಕಟ್ಟಡದ ದುರಸ್ತಿಗಾಗಿ ಈಗಾಗಲೇ ಕಳೆದ ವರ್ಷವೇ 6.5 ಲಕ್ಷ ರೂ. ಹೆಚ್ಚು ಅನುದಾನ ಬಂದಿದೆ. ಇದರಲ್ಲಿ ಕೊಠಡಿಗಳ ದುರಸ್ತಿ, ನೆಲಕ್ಕೆ ಟೈಲ್ಸ್, ಕಬ್ಬಿಣದ ರೂಫಿಂಗ್ ಅಳವಡಿಸಿ ಹೆಂಚುಗಳನ್ನು ಫಿಕ್ಸ್ ಮಾಡಬೇಕಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷೃದಿಂದ ತಡವಾಗಿತ್ತು. ಈ ವಿಚಾರವಾಗಿ ಈಗಾಗಲೇ ಗುತ್ತಿಗೆದಾರರೊಂದಿಗೆ ಮಾತನಾಡಿ ಮಂಗಳವಾರದಿಂದಲೇ ಕಾಮಗಾರಿ ಮಾಡಿಸಲಾಗುತ್ತಿದೆ ಎಂದರು.
ಮಳೆ ಜೋರಾಗುವುದಕ್ಕಿಂತ ಮುಂಚೆಯೇ ಮುಂದಿನ ಕೆಲವೇ ದಿನದೊಳಗೆ ಶಾಲಾ ಕಟ್ಟಡದ ಸಂಪೂರ್ಣ ಕೆಲಸ ಮುಗಿಸಲು ಗಡುವು ನೀಡಲಾಗಿದೆ. ನಂತರದಲ್ಲಿ ಶಾಲೆಗೆ ಮತ್ತು ಮಕ್ಕಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿ ಶಾಲಾ ಕಟ್ಟಡದಲ್ಲೆ ಪಾಠ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ಪರಿಶೀಲಿಸುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ. ಗ್ರಾಮಸ್ಥರೂ ನಮ್ಮೊಂದಿಗೆ ಸಹಕರಿಸಿ ಶಾಲಾ ಆವರಣ ಸ್ವಚ್ಛತೆಗೆ ಮತ್ತು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.