ಶಿಕ್ಷಣ ಕ್ಷೇತ್ರದ ಸಮಸ್ಯೆಗೆ ಸ್ಪಂದನೆ

22HLY-1
Published on

ಹಳಿಯಾಳ/ದಾಂಡೇಲಿ: ಪದವೀಧರರಿಗೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ನನ್ನ ಮುಂದಿನ ಗುರಿಯಾಗಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.

ಹಳಿಯಾಳ, ದಾಂಡೇಲಿಯಲ್ಲಿ ಅವರು ಗುರುವಾರ ಪ್ರಚಾರ ನಡೆಸಿದರು.

ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿ.ಡಿ. ಹೆಗಡೆ ಪಿ.ಯು ಕಾಲೇಜ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಪರವಾಗಿದ್ದಾರೆ. ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ಎನ್.ಪಿ.ಎಸ್ ಪಿಂಚಣಿ ಯೋಜನೆಯ ಬದಲು ಹಿಂದಿನ ಒ.ಪಿ.ಎಸ್ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. 15-20 ವರ್ಷಗಳ ಕಾಲ ಸರ್ಕಾರದ ಅನುದಾನವಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಅನುದಾನಗಳ ಸೌಲಭ್ಯ ಒದಗಿಸಲು ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ ಪ್ರೊ. ಸಂಕನೂರ ಅವರು ಅತ್ಯುತ್ತಮ ವ್ಯಕ್ತಿತ್ವವುಳ್ಳ ಅಭ್ಯರ್ಥಿಯಾಗಿದ್ದು, ಮತದಾರರ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ ಎಂದರು.

ತಾಲೂಕು ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಜಿಲ್ಲಾ ಪ್ರಮುಖರಾದ ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳೆ, ಶಿವಾಜಿ ನರಸಾನಿ, ವಿ.ಎಂ. ಪಾಟೀಲ, ಸಂತಾನ ಸಾವಂತ, ವಿಲಾಸ ಯಡವಿ, ಪುರಸಭೆ ಸದಸ್ಯ ಉದಯ ಹೂಲಿ, ಚಂದ್ರು ಕಮ್ಮಾರ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರೂಪಾ ಗಿರಿ, ವಿ.ಡಿ. ಹೆಗಡೆ ಕಾಲೇಜ್ ಪ್ರಾಚಾರ್ಯ ರಾಜಶೇಖರ ಬಾಬರ ಇತರರಿದ್ದರು.

ದಾಂಡೇಲಿಯ ವಿವಿಧ ಶಿಕ್ಷಣ ಸಂಸ್ಥೆ ಸ್ಥಳೀಯ ಬಾರ್ ಕೌನ್ಸಿಲ್ ಸಂಘದ ಸದಸ್ಯರನ್ನು ಸಂಕನೂರ ಅವರು ಭೇಟಿಯಾಗಿ ಮತ ಯಾಚಿಸಿದರು. ಈ ವೇಳೆ ಬಿಜೆಪಿ ಸ್ಥಳೀಯ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗುರ ಮಠಪತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಪ್ರಮುಖರಾದ ಅಶೋಕ ಪಾಟೀಲ, ಶಾರದಾ ಪರಶುರಾಮ, ರಫೀಕ ಹುದ್ದಾರ್, ರವಿ ಗಾಂವಕರ, ಸುಭಾಸ ಅರವೇಕರ್, ದಾಂಡೇಲಿ ಯುವ ಮೋರ್ಚಾದ ಅಧ್ಯಕ್ಷ ಈರಯ್ಯ ಸಾಲಿಮಠ, ಸ್ಥಳೀಯ ನಗರಸಭೆ ಸದಸ್ಯರು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net