ರಾಣೆಬೆನ್ನೂರ: ಇಲ್ಲಿಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ನಿಯಮಿತದ 44.95 ಲಕ್ಷ ರೂ. ಹಣ ದುರುಪಯೋಗ ಪಡೆಸಿಕೊಂಡ ಕುರಿತು ಮುಖ್ಯ ಕಾರ್ಯದರ್ಶಿ ಸೇರಿ 10 ಜನರ ವಿರುದ್ಧ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಮುಖ್ಯ ಕಾರ್ಯದರ್ಶಿ ಹನುಮಂತಪ್ಪ ರುದ್ರಪ್ಪ ಕೂಲೇರ (45) ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಎಸ್.ಸಿ. ಷಡಕ್ಷರಿಮಠ, ಎಂ.ಎನ್. ಗುಡ್ಡರೆಡ್ಡಿ, ಪಿ.ಆರ್. ಗೌಡರ, ಎಂ.ಎಂ. ಇಟಗೇರ, ಇ.ಎಸ್. ಮುರುಡೆಪ್ಪನವರ, ಬಿ.ಸಿ. ದೂಳೆಹೊಳೆ, ಎಸ್.ಟಿ. ರಾಠೋಡ, ವಿ.ವಿ. ಬಂಗಾರಿ, ಬಸನಗೌಡ ಎನ್. ಸೇರಿ ಒಟ್ಟು 10 ಜನರ ವಿರುದ್ಧ ದೂರು ದಾಖಲಾಗಿದೆ.
ಈ ಕುರಿತು ಸದ್ಯದ ಕಾರ್ಯದರ್ಶಿ ಹನುಮಂತಪ್ಪ ರುದ್ರಪ್ಪ ಯಲಿವಾಳ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಹನುಮಂತಪ್ಪ ಕೂಲೇರ ತಾನು ಸಹಕಾರಿ ನಿಯಮಿತದ ಮುಖ್ಯ ಕಾರ್ಯದರ್ಶಿಯಾಗಿದ್ದ 2015 ಆಗಸ್ಟ್ 4ರಿಂದ 2020 ಜನೇವರಿ 16ರವರೆಗೆ ಸಹಕಾರಿ ನಿಯಮಿತದ 44.95 ಲಕ್ಷ ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಿಸಿಕೊಂಡಿದ್ದಾನೆ. ಅಲ್ಲದೆ ಅದನ್ನು ಮರು ಪಾವತಿ ಮಾಡದೆ ನಂಬಿಕೆ ದ್ರೋಹ ಮಾಡಿ ಮೋಸ ಎಸಗಿದ್ದಾನೆ.
ಅಲ್ಲದೆ ಅಂದಿನ ಆಡಳಿತ ಮಂಡಳಿ ಸದಸ್ಯರೂ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷೃ ವಹಿಸಿ ಅಪರಾಧ ನಡೆಯಲು ಕಾರಣರಾಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.