

ಹಾನಗಲ್ಲ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲ 18 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.
18 ಸ್ಥಾನಗಳಿಗೆ 8 ಮಹಿಳೆಯರು, 32 ಪುರುಷರು ಸೇರಿದಂತೆ ಒಟ್ಟು 40 ಶಿಕ್ಷಕರು ನಾಮಪತ್ರ ಸಲ್ಲಿಸಿದ್ದರು. ಡಿ. 9 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ಡಿ. 10 ನಾಮಪತ್ರ ಹಿಂಪಡೆಯುವ ಕೊನೆ ದಿನವಾಗಿತ್ತು. ಈ ಹಿಂದಿನ ಅವಧಿಯ ಪದಾಧಿಕಾರಿಗಳೇ ಮುಂದುವರಿಯಬೇಕೆಂಬ ಅಭಿಲಾಷೆ ಎಲ್ಲರದ್ದಾಗಿತ್ತು. ಈ ಹಿನ್ನೆಲೆಯಲ್ಲಿ 18 ಜನ ಅಭ್ಯರ್ಥಿ ಹೊರತುಪಡಿಸಿ ಉಳಿದವರೆಲ್ಲ ನಾಮಪತ್ರ ಹಿಂಪಡೆದರು. ನಿಕಟಪೂರ್ವ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಅವರ ತಂಡದ ನವಚೇತನ ಶಿಕ್ಷಕರ ಬಳಗದ ಎಲ್ಲ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಶ್ರಾಂತ ಶಿಕ್ಷಕರಾದ ಟಿ.ಆರ್. ವೇದಂಭಟ್ನವರ ಹಾಗೂ ಎ.ಆರ್. ಪ್ರಾಣೇಶ್ರಾವ್ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ವಿಜೇತರು: ಮಂಜುನಾಥ ಗಂಟೇರ, ಉಮೇಶ ಸವಣೂರ, ಕೆ.ಮಹಾಬಳೇಶ್ವರ, ಸಿದ್ದಲಿಂಗ ಗೌರಣ್ಣನವರ, ಶಿವಾನಂದ ಚಕ್ರಸಾಲಿ, ಎಂ.ಎಸ್. ಬಡಿಗೇರ, ವಿಜಯೇಂದ್ರ ಯತ್ನಳ್ಳಿ, ಮಲ್ಲಪ್ಪ ಒಡೆಯರ, ಬಿ.ಎಸ್. ಚಲ್ಲಾಳ, ಬಸವರಾಜಪ್ಪ ಹರಿಜನ, ಬಸವರಾಜ ಬೆಳ್ಳಿಕಟ್ಟಿ, ಸಾವಿತ್ರಿ ಗೊಂದಿ, ಅನಿತಾ ಕಿತ್ತೂರ, ಪವಿತ್ರಾ ಕಾರಡಗಿ, ನಿರ್ಮಲಾ ಮತ್ತೂರ, ಶಿರೀನ್ ಗೋಡಿಯಾಳ ಅವಿರೋಧವಾಗಿ ಆಯ್ಕೆಯಾದವರು.
ನಂತರ ಗುರುಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಬಿಇಒ ಎಚ್.ಶ್ರೀನಿವಾಸ, ತಾಲೂಕಿನ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಗೊಳಿಸುವ ಮೂಲಕ ರಾಜ್ಯಕ್ಕೆ ಇಲ್ಲಿನ ಶಿಕ್ಷಕ ಸಮುದಾಯ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಪ್ರಾಮಾಣಿಕವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಮಾತನಾಡಿ, ಕಳೆದ ಅವಧಿಯಲ್ಲಿ ಕೈಗೊಂಡ ಗುರುಭವನ ಅಭಿವೃದ್ಧಿ ಕಾಮಗಾರಿ ಹಾಗೂ ಶಿಕ್ಷಕರ ವೈಯಕ್ತಿಕ ಸಮಸ್ಯೆಗಳ ಪರಿಹಾರ ಸಂದರ್ಭಗಳಿಂದ ಮತ್ತೊಮ್ಮೆ ನಮಗೆ ಅವಕಾಶ ದೊರೆತಿದೆ. ಎಲ್ಲರ ಭರವಸೆಗಳಿಗೆ, ಆಕಾಂಕ್ಷೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಈ ಹಿಂದೆ 2 ಅವಧಿಗೆ ಚುನಾವಣೆ ಏರ್ಪಟ್ಟಿದ್ದವು. ಈ ಬಾರಿ ಅವಿರೋಧ ಆಯ್ಕೆಗೊಳಿಸಲು ಆಯ್ಕೆ ಸಮಿತಿ ರಚಿಸಲಾಗಿತ್ತು. ಅದರಲ್ಲಿ ಎಂ.ಎ. ಜಾಗೀರದಾರ, ಶರಣಪ್ಪ ದೊಡ್ಮನಿ, ಜಿ.ಎಂ. ಪಂಚಾಳ, ಸಿ.ಜಿ. ಪಾಟೀಲ, ಜಿ.ಕೆ. ಶಂಕರ ಶ್ರಮಿಸಿದ್ದಾರೆ. ಹಳಬರೊಂದಿಗೆ ಹೊಸಬರನ್ನೂ ಸೇರಿಸಿಕೊಂಡ ನೂತನ ತಂಡ ರಚಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಎಂ. ಬೇವಿನಮರದ ಉಪಸ್ಥಿತರಿದ್ದರು.