ಶಾಸಕರ ಬೆಂಬಲ ಇಲ್ದೆ ಯಾರೂ ಸಿಎಂ ಆಗೋಕೆ ಆಗಲ್ಲ

bkt-13-11 a
Published on

ಬಾಗಲಕೋಟೆ: ನೋಡಿ ಹೈಕಮಾಂಡ್ ಈಸ್ ಹೈಕಮಾಂಡ್. ಆದರೆ, ಹೈಕಮಾಂಡ್ ಜೊತೆ ಶಾಸಕರ ನಿರ್ಧಾರವೂ ಮುಖ್ಯ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.

ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಸೋಮವಾರ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ರಾಜ್ಯದಲ್ಲಿ ಸಿಎಂ‌ ಬದಲಾವಣೆಗೆ ಹೈಕಮಾಂಡ್ ಅಂತಿಮ‌ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಬಹುಮತ ಇದ್ದರೆ ಮಾತ್ರ ಸಿಎಂ ಆಗುವುದು. ಇದರ ಜೊತೆಗೆ ಹೈಕಮಾಂಡ ಆಶೀರ್ವಾದವೂ ಬೇಕು ಎಂದರು.

ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.‌ ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದೇವೇಗೌಡರ ಆರೋಗ್ಯ ಸುಧಾರಿಸಿದೆ :

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಾ, ಅವರ ಆರೋಗ್ಯ ಸುಧಾರಣೆಯಾಗುತ್ತಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿಲಿದ್ದಾರೆ.‌ ಈ ಬಗ್ಗೆ ವೈದ್ಯ ಸತ್ಯನಾರಾಯಣ ಅವರಿಂದ ಮಾಹಿತಿ ಪಡೆದಿದ್ದಾಗಿ ತಿಳಿಸಿದರು.

ಸಂಪುಟ ಪುನರ್ರಚನೆಗೂ ಭೋಜನ ಕೂಟಕ್ಕೂ ಸಂಬಂಧವಿಲ್ಲ :

ಸಚಿವರಿಗೆ ಡಿನ್ನರ್ ಪಾರ್ಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನರ್ರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸಚಿವರಿಗೆ ಬಹಳ ಸಲ ಭೋಜನ ಕೊಟ್ಟಿದ್ದೇನೆ. ಬಹಳ ದಿನ ಆಗಿತ್ತು ಹೀಗಾಗಿ ಏರ್ಪಡಿಸಲಾಗಿದೆ. ಊಟದಲ್ಲಿ ಏನೂ ವಿಶೇಷತೆ ಇಲ್ಲ. ನಿಮಗೆ, ಬಿಜೆಪಿಯವರಿಗೆ ವಿಶೇಷತೆ ಕಾಣಿಸಿದೆ ಎಂದು‌ ನಗುತ್ತಲೇ ಹೇಳಿದ ಸಿಎಂ,

ನವೆಂಬರ್ ತಿಂಗಳಲ್ಲಿ ಯಾವುದೇ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದರು.

ನನಗೆ ಮಾಟಮಂತ್ರಗಳಲ್ಲಿ ನಂಬಿಕೆಯಿಲ್ಲ :

ಶಾಸಕ ಮುನಿರತ್ನ ಮತ್ತು ಡಿಕೆ ಶಿವಕುಮಾರ್ ಅವರ ನಡೆದ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಸಿಎಂ ಡಿ ಕೆ ಶಿವಕುಮಾರ್ ರವರು ನಿನ್ನೆ ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್ ಬಾಗ್ ನಂತೆ ಮತ್ತಿಕರೆಯ ಜೆ ಪಿಪಾರ್ಕ್ ದಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನರವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ . ನಾನು ಯಾವುದೇ ಮಾಟಮಂತ್ರಗಳಲ್ಲಿ ನಂಬಿಕೆಯಿರಿಸಿಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸೂಕ್ತ ಅನುದಾನ ನೀಡಿ, ಮುಂದಿನ ನಾಲ್ಕು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಸಂಪುಟ ಪುನರ್ರಚನೆ:

ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮಾಜದ ಇಬ್ಬರು ಸಚಿವರ ರಾಜೀನಾಮೆ ನಾವು ಪಡೆದಿಲ್ಲ.‌ ಅವರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net