ಕೊಳ್ಳೇಗಾಲ: ರಾಜ್ಯದ ಉಪ್ಪಾರ ಸಮುದಾಯ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರ್ಕಾರಕ್ಕೆ ಪಟ್ಟಣದ ಕಸಬಾ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗದ ಸಮುದಾಯದಲ್ಲಿ ಹುಟ್ಟಿದವರಾಗಿದ್ದಾರೆ. 4 ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದಲೇ ಅಧಿಕಾರವನ್ನು ನಡೆಸುತ್ತಿದ್ದಾರೆ. ಜನೋಪಯೋಗಿ ಮಾರ್ಗದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿ.ಪುಟ್ಟರಂಗಶೆಟ್ಟಿ ಅವರು ಸ್ವಲ್ಪ ತಿಂಗಳು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಪೂರ್ಣಾವಧಿವರೆಗೆ ಮಂತ್ರಿಯಾಗಿರಲಿಲ್ಲ. ಹಾಗಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಹಿರಿತನ ಹಾಗೂ ಜನರ ಸೇವೆ ಗುರುತಿಸಿ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.