ಶಾಸಕ ಯತ್ನಾಳ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದಾರೆ

bkt-24-3
Published on

ಬಾಗಲಕೋಟೆ: ನಾನು ಬಚ್ಚಾ. ನಾನೇನು ದೊಡ್ಡವನಲ್ಲ.‌ 21 ಕಾರ್ಖಾನೆ ಸ್ಥಾಪಿಸಿ 72 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇನೆ.‌ ಇನ್ನು ನಾನು ಸಣ್ಣವ ಎನ್ನುತ್ತಲೆ ಸಚಿವ‌ ಮುರುಗೇಶ ನಿರಾಣಿ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಗುಟುರು ಹಾಕಿದ್ದಾರೆ.

ನಗರದ ಪ್ರೇಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ದ ನಿತ್ಯ ವಾಗ್ದಾಳಿ ನಡೆಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಈಚೆಗೆ ಬಚ್ಚಾ ಎಂದಿದ್ದು ಹಾಗೂ ಬಿಜೆಪಿ ಟಿಕೆಟ್ ಕೊಡೆಸಲು ನನ್ನ ಮನೆಗೆ ಬರುತ್ತಿದ್ದರು ಎನ್ನುವ ಹೇಳಿಕೆಗೂ ಸಚಿವ ನಿರಾಣಿ ಜೋರಾಗಿಯೇ ಚಾಟಿ ಬೀಸಿದರು.

ಯತ್ನಾಳ ಹೆಸರು ಹೇಳದೇ, ಹೌದು, ನಾನು ಬಚ್ಚಾನೆ. ಈ ಬಚ್ಚಾನೆ ಇವತ್ತು ಸಾವಿರ ಜನರಿಗೆ ಉದ್ಯೋಗ ನೀಡಿದ್ದಾನೆ. ಕೈಗಾರಿಕೆ ಸಚಿವನಾಗಿ ಮೂರು ಗ್ಲೋಬಲ್ ಮೀಟ್ ನಡೆಸಿದ್ದಾರೆ. ವಿಶ್ವದಲ್ಲೆ ಈ ರೀತಿ ಒಬ್ಬರೇ ಮೂರು ಸಲ ಮಾಡಿಲ್ಲ. ರಾಜ್ಯಕ್ಕೆ ಲಕ್ಷಾಂತರ ಕೋಟಿ ಬಂಡವಾಳ ಬರುವಂತೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ. ಏಳು ವರ್ಷ ಕೈಗಾರಿಕೆ ಸಚಿವನಾಗಿದ್ದೇನೆ. ಅವರನ್ನು ಸಚಿವರನ್ನಾಗಿ ಮಾಡಿದ್ದರು. ಅದು ಬರೀ 7 ತಿಂಗಳು. ಮತ್ತೆ ಏಕೆ ಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಹೌದು, ಟಿಕೆಟ್ ಗಾಗಿ ನಾನು ಅವರ ಮನೆಗೆ ಹೋಗಿರಬಹುದು.‌ ನಾನು ಅನೇಕರ ಮನೆ ಹೋಗಿದ್ದೇನೆ. ಆದರೆ, ನೀವು ಯಾರ ಯಾರನೆಗೆ ಹೋಗಿದ್ದೀರಿ ಎಂದು ನೆನಪು ಮಾಡಿಕೊಳ್ಳಿ ಎಂದು ತಿರುಗೇಟು ಕೊಟ್ಟರು.

ವಾಯಪೇಯಿ, ಅಡ್ವಾಣಿ ಅವರನ್ನು ಬಿಟ್ಟು ನಾನು ಯಾರ ಕಾಲುಗೆ ಬಿದ್ದಿಲ್ಲ ಎಂದು ಯತ್ನಾಳ ಹೇಳುತ್ರಿರುವ ಬಗ್ಗೆ ವ್ಯಂಗ್ಯವಾಡಿದ ಸಚಿವ ನಿರಾಣಿ, ಈ ಬಗ್ಗೆ ಜನರು ನೋಡಿದ್ದಾರೆ. ಹಾಗಿದ್ದರೆ ಇತ್ತೀಚಿಗೆ ದೆಹಲಿಗೆ ಹೋಗಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದೇಕೆ? ಯಡಿಯೂರಪ್ಪ ಹಾಗೂ ನನ್ನ ಒಂದು ಮಾಡಿ ಎಂದು ಹೋಗಿಲ್ವಾ ಎಂದು ಪ್ರಶ್ನಿಸಿದರು.

ಯತ್ನಾಳ ಹೆಸರು ಹೇಳದೇ ಈಚೆಗೆ ಒಬ್ಬರು ಮರಾಠರು, ಕುರುಬರು, ವಾಲ್ಮೀಕಿಯರಿಗೆ ಮೀಸಲಾತಿ ಬೇಡಿಕೆ ಈಡೇರಬೇಕು ಎಂದು ಡೈಲಾಗ್ ಶುರು ಮಾಡಿದ್ದಾರೆ. ನೀವೇನು ಗುತ್ತಿಗೆ ತೆಗೆದುಕೊಂಡಿದ್ದೀರಾ? ಆ ಸಮಾಜದವರು ತಾರು ಇಲ್ವಾ? ನಾವು ಮನಸ್ಸು ಮಾಡಿದರೆ ಸರ್ಕಾರ ಕೆಡುವುತ್ತೇವೆ, ಸರ್ಕಾರ ತರುತ್ತೇವೆ ಅಂತಿದ್ದಾರೆ. ಈ ರೀತಿ ಉದ್ದಟತನ ಮಾತುಗಳು ಯಾರಿಗೂ ಬರಬಾರದು. ನಾಳೆ ಮತ್ತೆ ನಿಮ್ಮ ಬಾಯಿಚಪಲಕ್ಕೆ ನನ್ನ‌ ಬಗ್ಗೆ ಮಾತನಾಡುತ್ತೀರೆಂದು ನಾನು ಮಾತಾಡಿದ್ದೇನೆ. ನಿಮಗೆ ಗೊತ್ತಿರಲಿ ನಾನು ಬಿಜೆಪಿಯಲ್ಲೇ ಹುಟ್ಟಿದ್ದು, ಬಿಜೆಪಿಯಲ್ಲೆ ಸಾಯುತ್ತೇನೆ. ನಿಮ್ಮ ಹಾಗೆ ಬಿಜೆಪಿಯಲ್ಲಿ ಇದ್ದಾಗ ಹಿಂದೂತ್ವದ ಬಣ್ಣ ಹಚ್ಚಿಕೊಳ್ಳುವುದು, ಜೆಡಿಎಸ್ ನಲ್ಲಿ ಇದ್ದಾಗ ಟೋಪಿ ಹಾಕಿಕೊಂಡು ಟಿಪ್ಪು ಸುಲ್ತಾನ ಬಗ್ಗೆ ಹೊಗಳುವುದು. ಇನ್ನೊಂದೆಡೆ ಇದ್ದಾಗ ಎರಡೂ ಪಕ್ಷಗಳನ್ನು ಬೈಯೋದು. ಹೊತ್ತು ಬಂದಾಗ ಛತ್ರಿ ಹಿಡಿಯೋದು ಈ ಮುರುಗೇಶ್ ನಿರಾಣಿ ಜಾಯಮಾನವಲ್ಲ ಎಂದು ಯತ್ನಾಳರನ್ನ ಜಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net