ಶಾಸಕ ಬಿ.ಸಿ.ಪಾಟೀಲಗೆ ಹಿಗ್ಗೋ.. ಹಿಗ್ಗು..

B C Pital.1jpg
Published on

ಹಾವೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಗುರುವಾರ ಮಹೂರ್ತ ನಿಗದಿಯಾಗಿದ್ದು, ಜಿಲ್ಲೆಯ ಹಿರೇಕೆರೂರ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದ ಜಿಲ್ಲೆಗೆ ಬಿಎಸ್​ವೈ ಸಂಪುಟದಲ್ಲಿ ಡಬಲ್ ಧಮಾಕಾ ಸಿಕ್ಕಂತಾಗುತ್ತದೆ.

ಈಗಾಗಲೇ ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಸಚಿವರಾಗಿದ್ದು, ಗುರುವಾರ ಸಂಪುಟ ವಿಸ್ತರಣೆಯಲ್ಲಿ ಶಾಸಕ ಬಿ.ಸಿ. ಪಾಟೀಲ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ. ಇದರಿಂದ 7 ವರ್ಷಗಳ ನಂತರ ಸಂಪುಟದಲ್ಲಿ ಜಿಲ್ಲೆಯ ಇಬ್ಬರು ಸಚಿವರಾಗಲಿದ್ದಾರೆ.

ಬಿಸಿಪಿ ಕನಸು ನನಸು: ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲರು ಸಚಿವರಾಗುವ ಉದ್ದೇಶದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಬಿ.ಸಿ. ಪಾಟೀಲ ಆಸೆಗೆ ಮೈತ್ರಿ ಸರ್ಕಾರದಲ್ಲಿ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ಗುರುವಾರ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹಿರೇಕೆರೂರಗೆ 3 ದಶಕಗಳ ನಂತರ ಸಚಿವ ಸ್ಥಾನ ಭಾಗ್ಯ: ಹಿರೇಕೆರೂರ ಕ್ಷೇತ್ರದಲ್ಲಿ ಈ ಹಿಂದೆ ಶಂಕರರಾವ್ ಗುಬ್ಬಿ ಹಾಗೂ ಬಿ.ಜಿ. ಬಣಕಾರ ಸಚಿವರಾಗಿದ್ದರು. ಅವರ ನಂತರ ಬರೋಬ್ಬರಿ 3ದಶಕಗಳ ಬಳಿಕ ಹಿರೇಕೆರೂರ ಕ್ಷೇತ್ರಕ್ಕೆ ಸಚಿವ ಸ್ಥಾನದ ಭಾಗ್ಯ ಲಭಿಸಿದೆ.

ಕ್ಷೇತ್ರದಿಂದ ಸಾವಿರಾರು ಜನರು ಬೆಂಗಳೂರಿಗೆ: ಕ್ಷೇತ್ರದ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ಕಣ್ಣಾರೆ ಕಂಡು ಅವರನ್ನು ಅಭಿನಂದಿಸಲು ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ಬುಧವಾರ ಸಂಜೆ ಬೆಂಗಳೂರನತ್ತ ಪ್ರಯಾಣ ಬೆಳೆಸಿದ್ದಾರೆ.

7 ವರ್ಷಗಳ ಬಳಿಕ ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆಯುತ್ತಿದೆ. ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ, ಹಾನಗಲ್ಲ ಶಾಸಕರಾದ ಸಿ.ಎಂ. ಉದಾಸಿಯವರು ಸಂಪುಟ ದರ್ಜೆ ಸಚಿವರಾಗಿದ್ದರು. ಗುರುವಾರ ಬಿ.ಸಿ. ಪಾಟೀಲ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೆ, ಮತ್ತೆ ಬಸವರಾಜ ಬೊಮ್ಮಾಯಿ ಹಾಗೂ ಬಿ.ಸಿ. ಪಾಟೀಲ ಸಂಪುಟ ದರ್ಜೆ ಸಚಿವರಾಗಲಿದ್ದಾರೆ.

ಕ್ಷೇತ್ರದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬುಧವಾರ ಸಂಜೆ 4.34ಕ್ಕೆ ಸಿಎಂ ದೂರವಾಣಿ ಕರೆ ಮಾಡಿ ಗುರುವಾರ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇಂತಹುದೇ ಖಾತೆ ಬೇಕು ಎಂದು ನಾನು ಕೇಳಿಲ್ಲ. ನೋಡೋಣ ಒಳ್ಳೆಯ ಖಾತೆಯನ್ನೇ ಕೊಡುವ ನಿರೀಕ್ಷೆಯಿದೆ. | ಬಿ.ಸಿ. ಪಾಟೀಲ, ಶಾಸಕರು, ಹಿರೇಕೆರೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net