ಕೊಳ್ಳೇಗಾಲ: ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ ಶೇಖರ್ ಬುದ್ಧ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಹೇಳಿದರು.
ಮಾ.29 ರಂದು ನಿಗದಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಣ್ಣಿನ ಸಮಸ್ಯೆ ಕಾರಣ ಗೈರು ಹಾಜರಾಗಿದ್ದರು. ಕಣ್ಣಿನ ಚಿಕಿತ್ಸೆ ಪಡೆದ ಕಾರಣ ಕೆಲ ಗಂಟೆಗಳು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯವಿತ್ತು. ಹಾಗಿ ಸಭೆಗೆ ಬರಲು ಸಾಧ್ಯವಾಗಲಿಲ್ಲ. ವಿಶ್ರಾಂತಿ ಮುಗಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಬೊಪ್ಪೇಗೌಡನ ಪುರಕ್ಕೆ ತೆರಳಿದ್ದಾರೆ. ಇದನ್ನು ಶೇಖರ್ ಬುದ್ಧ ಅವರು ಜನತೆಗೆ ತಪ್ಪಾಗಿ ಅರ್ಥೈಸುತ್ತಿದ್ದಾರೆ. ದೇವಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಶಾಸಕರ ಮೇಲೆ ಆರೋಪ ಮಾಡುತ್ತಿರುವುದು ತರವಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನಂತ್‌ಕುಮಾರ್ ಹೆಗ್ಗಡೆ ಅವರ ಹೇಳಿಕೆ ಖಂಡಿಸಿ ಶಾಸಕರು ಬಿಜೆಪಿ ತೊರೆದರು. ಅಂಬೇಡ್ಕರ್ ವಾದಿಯಾಗಿರುವ ಶಾಸಕರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನವಿಲನ್ನು ನೋಡಿ ಕೆಂಬೂತ ಪುಕ್ಕ ಕಿತ್ತು ಕೊಂಡಂತಾಗಿದೆ ಶೇಖರ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಸಕರ ಬಳಿ ಶೇಖರ್ ಬುದ್ಧ ಮಗಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಪಡೆದಿದ್ದಾರೆ. 10 ಲಕ್ಷ ರೂ. ಕಾಮಗಾರಿ ಪಡೆದುಕೊಂಡು 2 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ ಎಂದು ಕಿಡಿಕಾರಿದರು.
ನಗರಸಭೆ ಸದಸ್ಯರಾದ ರಾಮಕೃಷ್ಣ, ಶಾಂತರಾಜು, ಮಂಜುನಾಥ್, ಪ್ರಕಾಶ್, ಧರಣೇಶ್, ರಾಘವೇಂದ್ರ, ರಾಮಕೃಷ್ಣ, ನಾಗಣ್ಣ, ನಾಮನಿರ್ದೇಶನ ಸದಸ್ಯ ನರಸಿಂಹ, ಅನ್ಸರ್ ಬೇಗ್, ಸ್ವಾಮಿ ನಂಜಪ್ಪ, ದೇವಾನಂದ, ಶಿವಮಲ್ಲು, ಮಾಜಿ ಅಧ್ಯಕ್ಷ ರಮೇಶ್, ಜಗದೀಶ್ ಶಂಕನಪುರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಸ್ತೀಪುರ ರವಿ, ಪ್ರಭುಸ್ವಾಮಿ, ರಮೇಶ್, ಸಿದ್ದಾರ್ಥ ಮತ್ತಿತರಿದ್ದರು.