

ಹಾವೇರಿ: ಕರೊನಾ ವೈರಸ್ ನಿಯಂತ್ರಣಕ್ಕೆ ಬರದೇ ಇರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆಗಸ್ಟ್ ತಿಂಗಳಾದರೂ ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕಲಿಕಾ ಸಂಪರ್ಕ ತಪ್ಪದಂತೆ ಮಾಡಲು ಜಿಲ್ಲಾ ಶಿಕ್ಷಣ ಇಲಾಖೆಯು ಬಯಲು, ಸಭಾಭವನಗಳಲ್ಲಿ ಶಾಲೆಗಳನ್ನು ಆರಂಭಿಸಿದೆ.
ಇತ್ತೀಚೆಗೆ ‘ವಿಜಯವಾಣಿ’ ಯಲ್ಲಿ ‘ಕೃಷಿ ಕಾಯಕದಲ್ಲಿ ಗ್ರಾಮೀಣ ಮಕ್ಕಳು’ ವಿಶೇಷ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಶಿಕ್ಷಣ ಇಲಾಖೆಯು ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಾಸವಿರುವ ವಠಾರಗಳಲ್ಲಿಯೇ ಶಾಲೆಗಳನ್ನು ಆರಂಭಿಸಿದೆ.
ಶಿಕ್ಷಕರು ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳ ಮನೆಗಳ ಅಕ್ಕಪಕ್ಕದಲ್ಲಿರುವ ಸಮುದಾಯ ಭವನ, ದೇವಸ್ಥಾನ, ಬಯಲು ಕಟ್ಟೆಗಳಲ್ಲಿ ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸಿ ಮಕ್ಕಳಿಗೆ ಬೋಧನೆ ಆರಂಭಿಸಿದ್ದಾರೆ. ಕರೊನಾ ಆತಂಕದ ನಡುವೆಯೂ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದೆಂಬ ಉದ್ದೇಶದಿಂದ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿ ಶಾಲೆಗಳನ್ನು ಆರಂಭಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಂಸತವನ್ನುಂಟು ಮಾಡಿದೆ.
ಕಲಿಕೆಯತ್ತ ಮಕ್ಕಳು: ಗ್ರಾಮೀಣ ಭಾಗದಲ್ಲಿ ಆನ್ಲೈನ್ ಶಿಕ್ಷಣ ಬಹುತೇಕ ಮರೀಚಿಕೆಯಾಗಿತ್ತು. ಹೀಗಾಗಿ, ಮನೆಯಲ್ಲಿ ಖಾಲಿಯಿರುವ ಬದಲು ಮಕ್ಕಳನ್ನು
ಪಾಲಕರೇ ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗಲು ಆರಂಭಿಸಿದ್ದರು. ಇದೀಗ ಗ್ರಾಮಗಳಲ್ಲಿಯೇ ಬಯಲು ಶಾಲೆಗಳು ಆರಂಭಗೊಂಡಿರುವುದರಿಂದ ಕೃಷಿ ಕೆಲಸ ಬಿಟ್ಟು ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆಯಾ ಗ್ರಾಮದ ದೇವಸ್ಥಾನ, ಬಯಲು ಜಾಗ, ಮನೆಯ ಕಟ್ಟೆಗಳ ಮೇಲೆ 22 ವಿದ್ಯಾರ್ಥಿಗಳಿಗೆ ಒಂದು ವರ್ಗದಂತೆ ಕಲಿಕಾ ಕೇಂದ್ರಗಳನ್ನು ತಾಲೂಕಿನಾದ್ಯಂತ ಆರಂಭಿಸಲಾಗಿದೆ.
ಕಲಿಕಾ ಕೇಂದ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಶಿಕ್ಷಕರು ಕ್ರಮ ವಹಿಸುತ್ತಿದ್ದಾರೆ. ಕಲಿಕಾ ಕೇಂದ್ರಗಳಿಗೆ ವಿವಿಧ ಮಠಾಧೀಶರು, ದೇವಸ್ಥಾನ ಸೇವಾ ಸಮಿತಿಯವರು, ಗ್ರಾಪಂ ಅಧಿಕಾರಿಗಳು ಸಹಕಾರ ನೀಡಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಕರೊನಾ ಸಮಯದಲ್ಲಿ ಶಾಲೆಗಳ ಆರಂಭಕ್ಕೆ ಸರ್ಕಾರದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣ ಆರಂಭಿಸಲಾಗಿತ್ತು. ಅದು ಕೈಗೆಟುಕದ ಮಕ್ಕಳಿಗೆ ಹಾಗೂ ಇತರ ಮಕ್ಕಳಿಗೂ ಕಲಿಕೆಯ ರೂಢಿ ತಪ್ಪದಂತೆ ಮಾಡಲು ಬಯಲು ಶಾಲೆಗಳನ್ನು ಆರಂಭಿಸಿದ್ದೇವೆ. ಕಲಿಕಾ ಕೇಂದ್ರ ಹಂಚಿಕೆಯಾಗಿರುವ ಶಿಕ್ಷಕರು ಪ್ರತಿದಿನ ಎಷ್ಟು ವಿದ್ಯಾರ್ಥಿಗಳು ಹಾಜರಿದ್ದರು. ಯಾವ ಪಾಠ ಬೋಧನೆ ಮಾಡಲಾಗಿದೆ ಎಂಬ ವರದಿಯನ್ನು ವಾಟ್ಸ್ಆಪ್ ಸಂದೇಶದ ಮೂಲಕ ವಲಯವಾರು ಸಿಆರ್ಸಿಗಳಿಗೆ ಹಾಗೂ ನನಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ.| ಎಂ.ಎಚ್. ಪಾಟೀಲ ಬಿಇಒ ಹಾವೇರಿಶಾಲೆಗಳು ಆರಂಭವಾಗದೇ ಇದ್ದುದರಿಂದ ನಮ್ಮ ಮಕ್ಕಳು ಬರೀ ಆಟೋಟಗಳಲ್ಲಿ ಕಾಲಹರಣ ಮಾಡುತ್ತಿದ್ದರು. ಈಗ ನಮ್ಮ ವಠಾರದಲ್ಲಿಯೇ ಕಲಿಕಾ ಕೇಂದ್ರ ಆರಂಭಿಸಿ ಶಿಕ್ಷಕರು ಪ್ರತಿದಿನ ಬಂದು ಪಾಠ ಮಾಡುತ್ತಿರುವುದು ಸಂತಸ ತಂದಿದೆ.| ನಾಗಪ್ಪ ಕಟ್ಟೆಣ್ಣನವರ ಪಾಲಕ