

ಸರಗೂರು: ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಶಾಲೆ ಅವ್ಯವಸ್ಥೆ ಖಂಡಿಸಿ ಹಾಗೂ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ಪಾಲಕರು, ಗ್ರಾಮ ಪಂಚಾಯಿತಿ ಸದಸ್ಯರು ಒಟ್ಟಗೂಡಿ ಗುರುವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹಾದನೂರು ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಕಳೆದ ವರ್ಷ ಶಾಸಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗೆ ಶಾಲೆಯಲ್ಲಿ 100 ರಿಂದ 140 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಗತ್ಯ ಶಿಕ್ಷಕರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದೆವು. ಅದರಂತೆ ನೇಮಕ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಶಿಕ್ಷಕರನ್ನು ನೇಮಕ ಮಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
140 ಮಕ್ಕಳಿಗೆ ಒಬ್ಬರೇ ಶಿಕ್ಷಕರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಮಕ್ಕಳಿಗೆ ಕಾಗುಣಿತ, ಅಕ್ಷರ ಮಾಲೆ, ಹಿಂದಿ ವರ್ಣಮಾಲೆಯ ಅಕ್ಷರಗಳ ಪರಿಚಯವೇ ಇಲ್ಲ. ಹೀಗಾದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬರುವವರೆಗೂ ಶಾಲೆಯ ಬೀಗ ತೆಗೆಯುವುದಿಲ್ಲ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರೂ ಬಗ್ಗಲಿಲ್ಲ. ಬಳಿಕ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಸಂಪನ್ಮೂಲ ಅಧಿಕಾರಿ ಚಂದ್ರಶೇಖರ ಆದೇಶ ಪತ್ರವನ್ನು ತೋರಿಸಿದ್ದರಿಂದ ಪ್ರತಿಭಟನೆ ಕೈಬಿಟ್ಟರು.
ರಾಜೇಶ್, ಗ್ರಾಪಂ ಸದಸ್ಯೆ ರತ್ನಮ್ಮ ರಾಜೇಶ್, ಶಿವರಾಜು, ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಸಿದ್ದಯ್ಯ, ಬಸವಣ್ಣ, ನಾಗರಾಜು, ರಾಜಯ್ಯ, ಸಣ್ಣಕುಸೂಯ್ಯ, ಸಣ್ಣಸ್ವಾಮಿ, ರಾಮಕೃಷ್ಣ, ಶಿವು, ನಂಜಪ್ಪ, ರವಿ, ರೇವಣ್ಣ, ಶಶಿಕುಮಾರ್, ಚಿಕ್ಕಣ್ಣ, ಶಿವರಾಜು ಹಾಜರಿದ್ದರು.