ಶಾಲಿನಿ ಸಿದ್ದಿ ಒನ್ ಡೇ ಜಿಪಂ ಸಿಇಒ

29KWR3
Published on

ಕಾರವಾರ; ಜಿಲ್ಲಾ ಪಂಚಾಯಿತಿಯ ಒಂದು ದಿನದ ಸಿಇಒ ಆಗಿ ಹಳಿಯಾಳದ ಕ್ರೀಡಾಪಟು ಶಾಲಿನಿ ಶಾಯರ್ ಸಿದ್ದಿ ಶುಕ್ರವಾರ ಅಧಿಕಾರ ನಿರ್ವಹಿಸಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಜಿಪಂ ಕಾಯಂ ಸಿಇಒ ಪ್ರಿಯಾಂಗಾ ಎಂ. ಅವರು ಪ್ರಸಿದ್ಧ ಕ್ರೀಡಾಪಟುವಿಗೆ ಈ ಅವಕಾಶ ಹಾಗೂ ಗೌರವ ನೀಡಿದ್ದರು. ತಮ್ಮ ಕುರ್ಚಿಯಲ್ಲಿ ಅವರನ್ನು ಕೂರಿಸಿ ಸನ್ಮಾನ ಮಾಡಿದರು. ಜಿಪಂ ಸಿಇಒ ಕಾರ್ಯಗಳು ಹಾಗೂ ಸರ್ಕಾರದಿಂದ ಜನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಶಾಲಿನಿ ಸಿದ್ದಿ ಅವರಿಗೆ ವಿವರಣೆ ನೀಡಿದರು. ಮಾತ್ರವಲ್ಲ, ಹೆಣ್ಣು ಮಕ್ಕಳ ದಿನದ ಉದ್ಘಾಟನೆಯನ್ನೂ ಅವರ ಕೈಯಿಂದಲೇ ಮಾಡಿಸಿದರು.

ಮಾದರಿ ಸಿಇಒ ಕಾರ್ಯಕ್ರಮ: ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ಜ.24 ರಂದು ಪ್ರತಿ ವರ್ಷ ಉಕ ಜಿಪಂನಲ್ಲಿ ‘ಮಾದರಿ ಸಿಇಒ’ ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ.ತಿಳಿಸಿದರು.

ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಪಂ ಸಿಇಒ ಅವರ ಕಾರ್ಯವೈಖರಿ ಹಾಗೂ ಎಲ್ಲ ವಿಭಾಗಗಳ ಕಾರ್ಯವನ್ನು ತೋರಿಸುವ ಮೂಲಕ ಮಾದರಿ ಸಿಇಒ ಹುದ್ದೆ ಅಲಂಕರಿಸಿದವರಿಗೆ ಸ್ಪೂರ್ತಿ ತುಂಬಲಾಗುತ್ತದೆ ಎಂದರು.

ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಹೆಣ್ಣು-ಗಂಡಿನ ಲಿಂಗಾನುಪಾತದಲ್ಲಿ ವ್ಯತ್ಯಾಸ ಹೆಚ್ಚುತ್ತಿದೆ. ಶೇ. 43 ರಷ್ಟು ಹೆಣ್ಣು ಮಕ್ಕಳು ಮಾತ್ರ ಪದವಿ ಪೂರ್ವ ಹಂತದ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಗಂಡುಮಕ್ಕಳಿಗೆ ಕೊಡುವಷ್ಟೇ ಪ್ರಾಶಸ್ಱವನ್ನು ಹೆಣ್ಣು ಮಕ್ಕಳಿಗೂ ನೀಡುವ ಮೂಲಕ ಲಿಂಗಾನುಪಾತ ತಾರತಮ್ಯದ ನಿವಾರಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಮಹಿಳೆಯರಿಗೆ ಸಾಧನೆ ಮಾಡಲು ಸಾಕಷ್ಟು ಅವಕಾಶವಿದೆ. ಮಹಿಳೆಯರು ಹಿಂಜರಿಕೆ ಮನೋಭಾವದಿಂದ ಹೊರ ಬರಬೇಕು ಎಂದರು. ವಕೀಲೆ ವರದಾ ನಾಯ್ಕ ಉಪನ್ಯಾಸ ನೀಡಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಗಜಾನನ ಭಟ್, ಯೋಜನಾಧಿಕಾರಿ ವಿನೋದ ಅಣ್ವೇಕರ್, ಉಪ ಕಾರ್ಯದರ್ಶಿಗಳಾದ ನಾಗೇಶ ರಾಯ್ಕರ್, ವಿನೋದ ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ. ಎಸ್​ಬಿಎಂ ಸಮಾಲೋಚಕ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.

ಯಾರು ಇವರು?: ಶಾಲಿನಿ ಸಿದ್ದಿ ಹಳಿಯಾಳ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿನಿ. ಕುಸ್ತಿಯಲ್ಲಿ ಹೆಸರು ಮಾಡಿದ್ದಾರೆ. 2020ರಲ್ಲಿ ನವದೆಹಲಿಯಲ್ಲಿ ಜರುಗಿದ 49 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಅವರು ರಾಜ್ಯವನ್ನು ಪ್ರತಿನಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net