

ಬಾಗಲಕೋಟೆ: ಪ್ರವಾಸ ದರ್ಶನ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ವಿಜೇತರಾದ ವಿದ್ಯಾರ್ಥಿಗಳನ್ನು ರವಿವಾರ ತಮ್ಮ ಮನೆಗೆ ಆಹ್ವಾನಿಸಿ ಅವರ ಜೊತೆ ಉಪಹಾರ ಸವಿದರು.
ಪ್ರವಾಸೋದ್ಯಮ ಇಲಾಖೆ ಯೋಜನೆಯಡಿ ಶಾಲಾ ಮಕ್ಕಳಿಗೆ ಕರ್ನಾಟಕ ಪ್ರವಾಸ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದ ನಂತರ ಪ್ರವಾಸದ ಮುಗಿದ ಮೇಲೆ ಪ್ರವಾಸ ದರ್ಶನ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲು ಶಾಲಾ ಶಿಕ್ಷಣ ಇಲಾಖೆಗೆ ತಿಳಿಸಿದ್ದರು. ಅಲ್ಲದೇ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಉಪಹಾರದ ಪಾರ್ಟಿ ಕೊಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸ ದರ್ಶನ ಕುರಿತು ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ನವನಗರದ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪೃಥ್ವಿ ಕುಂಬಾಳಿವತಿ (ಪ್ರಥಮ), ಕದಾಂಪೂರ ಆರ್.ಸಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಭಾಗ್ಯಶ್ರೀ ಇಂಗಳಗಿ (ದ್ವಿತೀಯ), ನವನಗರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಶ್ರದ್ದಾ ಹಳ್ಳೂರ (ತೃತೀಯ) ಸ್ಥಾನ ಪಡೆದು ವಿಜೇತರಾಗಿದ್ದರು.
ವಿಜೇತರಾದ ಶಾಲಾ ಮಕ್ಕಳನ್ನು ರವಿವಾರ ತಮ್ಮ ಮನೆಗೆ ಆಹ್ವಾನಿಸಿ, ಮಕ್ಕಳನ್ನು ಸನ್ಮಾನಿಸಿ ನಂತರ ತಮ್ಮ ಕುಟುಂಬ ಸದಸ್ಯರೊಂದಿಗೆ ಅವರ ಜೊತೆ ಉಪಹಾರ ಸೇವನೆ ಮಾಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕ ಪಡೆದ ಬೀಳಗಿ ಆದರ್ಶ ವಿದ್ಯಾಲಯದ ಷಫಾ ನಿಂಬಾಳ್ಕರ ವಿದ್ಯಾರ್ಥಿಯನ್ನು ಕೂಡ ಆಹ್ವಾನಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್.ಜಿ.ಮಿರ್ಜಿ, ಆದರ್ಶ ವಿದ್ಯಾಲಯದ ಮುಖ್ಯಗುರು ಬಿ.ವಿ.ಪಾಟೀಲ ಇದ್ದರು.